ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿರುವ ಬೆನ್ನಲ್ಲೇ ಇದಕ್ಕೆ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.
ನವದೆಹಲಿ : ‘ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ’ ಎಂದು ಕಾಂಗ್ರೆಸ್ ಮುಖಂಡ ವಿಲಾಸ್ ಮುತ್ತೆಮ್‌ವಾರ್ ಮಾಡಿದ ಟೀಕೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಮೂರು ಪ್ರಶ್ನೆಗಳ ಮೂಲಕ ತಿರುಗೇಟು ನೀಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಈ ಬಗ್ಗೆ 3 ಪ್ರಶ್ನೆಗಳನ್ನು ಕೇಳಿರುವ ಜೇಟ್ಲಿ, ‘ಮಹಾತ್ಮಾ ಗಾಂಧೀಜಿ ತಂದೆಯ ಹೆಸರು ಏನು? ಸರ್ದಾರ್ ಪಟೇಲರ ತಂದೆಯ ಹೆಸರೇನು? ಸರ್ದಾರ್ ಪಟೇಲರ ಪತ್ನಿಯ ಹೆಸರೇನು?’ ಎಂದು ಅವರು ಪ್ರಶ್ನಿಸಿ, ಇಂತಹ ಪ್ರಶ್ನೆಗಳಿಗೆ ಎಲ್ಲರಿಗೂ ಉತ್ತರ ಗೊತ್ತಿರುವುದಿಲ್ಲ ಎಂದಿದ್ದಾರೆ.
ಬರೀ ಅಡ್ಡಹೆಸರು ಇಟ್ಟುಕೊಂಡು ರಾಜಕೀಯ ಮಾಡುವ ಪಕ್ಷ ಕಾಂಗ್ರೆಸ್‌ನದ್ದಾಗಿದೆ. ಪಕ್ಷಕ್ಕೆ ಅಹರ್ನಿಶಿ ದುಡಿದವರಿಗೆ ಅಲ್ಲಿ ಸ್ಥಾನಮಾನ ಸಿಗದು. ಕಾಂಗ್ರೆಸ್‌ನಲ್ಲಿ ಉನ್ನತ ಹುದ್ದೆಗೆ ಏರಬೇಕೆಂದರೆ ಅಲ್ಲಿ ಗಾಂಧಿ ಎಂಬ ಅಡ್ಡಹೆಸರು ಪ್ರಾಧಾನ್ಯತೆ ಪಡೆಯುತ್ತದೆ ಎಂದು ಜೇಟ್ಲಿ ಟೀಕಿಸಿದ್ದಾರೆ.
