ಅರ್ಧತಾಸು ಓದಿಯೂ ಅರ್ಜಿ ಅರ್ಥವಾಗದ್ದಕ್ಕೆ ಸಿಜೆಐ ಗರಂ| ಇದೆಂಥ ಅರ್ಜಿ? ಏನು ಹೇಳ್ತಿದ್ದೀರಿ?| ಕಾಶ್ಮೀರ ಕುರಿತ ಅರ್ಜಿದಾರನಿಗೆ ತರಾಟೆ
ನವದೆಹಲಿ[ಆ.17]: ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ಅಂತ್ಯಗೊಳಿಸುವ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಧುಮುಕಿ ದೋಷಪೂರಿತ ಅರ್ಜಿ ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಎಂ.ಎಲ್. ಶರ್ಮಾ ಅವರು ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಈ ಬಗ್ಗೆ ಶುಕ್ರವಾರದ ವಿಚಾರಣೆ ವೇಳೆ ನ್ಯಾ. ರಂಜನ್ ಗೊಗೋಯ್ ಅವರು, ‘ಇದು ಯಾವ ರೀತಿಯ ಅರ್ಜಿ? ನೀವು ಯಾವ ವಿಚಾರದ ವಿರುದ್ಧ ಅರ್ಜಿ ಸಲ್ಲಿಸಿದ್ದೀರಿ? ಏನನ್ನು ಅರಿಕೆ ಮಾಡಿಕೊಂಡಿದ್ದೀರಿ? ನಿಮ್ಮ ಅರ್ಜಿಯನ್ನು ನಾನು ಅರ್ಧ ಗಂಟೆ ಓದಿದ್ದೇನೆ. ಆದರೆ, ಏನೂ ಅರ್ಥವಾಗಿಲ್ಲ’ ಎಂದು ವಕೀಲ ಎಂ.ಎಲ್ ಶರ್ಮಾ ಅವರ ವಿರುದ್ಧ ಗರಂ ಆದರು.
ಏತನ್ಮಧ್ಯೆ, ಸಂವಿಧಾನದ 370ನೇ ವಿಧಿ ಹಾಗೂ 35(ಎ) ಪರಿಚ್ಛೇದ ತೆರವು ಮಾಡಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಹೇರಲಾದ ನಿಷೇಧಾಜ್ಞೆ ತೆರವು ಮಾಡಬೇಕು. ನಿಷೇಧಾಜ್ಞೆಯಿಂದ ಪತ್ರಿಕೆ ಮುದ್ರಣ ಸಾಧ್ಯವಾಗುತ್ತಿಲ್ಲ ಎಂದು ದೂರಿ ಕಾಶ್ಮೀರ ಟೈಮ್ಸ್ ಪತ್ರಿಕೆಯ ಸಂಪಾದಕಿ ಅನುರಾಧಾ ಭಾಸಿನ್ ಅವರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದು, ಲ್ಯಾಂಡ್‌ಲೈನ್ ಹಾಗೂ ಬ್ರಾಡ್‌ಬ್ಯಾಂಡ್ ಸೇವೆ ಪುನಾರಂಭವಾಗಿದೆ ಎಂದು ಪತ್ರಿಕೆಯಿಂದ ತಿಳಿದಿದ್ದೇವೆ. ಹೀಗಾಗಿ, ಕೆಲ ದಿನ ಕಾಯುವಂತೆ ಅರ್ಜಿದಾರರಿಗೆ ಸುಪ್ರೀಂ ಸೂಚಿಸಿತು.
ಅಲ್ಲದೆ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಒಟ್ಟಾರೆ 7 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಕಾಶ್ಮೀರ ವಕೀಲ ಶಕೀಲ್ ಶಬೀರ್ ಎಂಬುವರ ಅರ್ಜಿಯೂ ದೋಷಯುಕ್ತವಾಗಿದೆ. ಮುಂದಿನ ವಿಚಾರಣೆಯಷ್ಟರಲ್ಲಿ ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಸೂಚನೆ ನೀಡಿತು.
