ಬೆಂಗಳೂರು :  ತೆರಿಗೆ ವಂಚನೆ ಆರೋಪ ಸಂಬಂಧ ಕನ್ನಡ ಚಿತ್ರರಂಗದ ಖ್ಯಾತ ನಟರು ಹಾಗೂ ನಿರ್ಮಾಪಕರ ಮೇಲೆ ಆರಂಭವಾದ ಆದಾಯ ತೆರಿಗೆ (ಐಟಿ) ದಾಳಿ ಶನಿವಾರ ಒಂದು ಹಂತಕ್ಕೆ ಬಂದಿದ್ದು, ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ಯಶ್‌, ನಿರ್ಮಾಪಕರಾದ ಜಯಣ್ಣ, ವಿಜಯ್‌ ಕಿರಗಂದೂರು ಹಾಗೂ ರಾಧಿಕಾ ಪಂಡಿತ್‌ ಅವರ ತಂದೆಯ ನಿವಾಸದ ಮೇಲೆ ನಡೆದ 48 ಗಂಟೆಗಳ ದಾಳಿ ಮುಗಿದಿದೆ. ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ಸಿ.ಆರ್‌.ಮನೋಹರ್‌ ಅವರ ಆಸ್ತಿಪಾಸ್ತಿಗಳ ಮೇಲಿನ ದಾಳಿ ಭಾನುವಾರ ಮುಗಿಯುವ ನಿರೀಕ್ಷೆಯಿದೆ.

ದಾಳಿಯ ವೇಳೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ನಿವಾಸ, ಕಚೇರಿ ಸೇರಿದಂತೆ ಇತರೆ ಸ್ಥಳಗಳಿಂದ ಮಹತ್ವದ ದಾಖಲೆಗಳನ್ನು ಈ ವೇಳೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇವುಗಳ ಸಮಗ್ರ ಪರಿಶೀಲನೆ ನಡೆಯಲಿದೆ.

‘ಗುರುವಾರದಿಂದ ಆರಂಭವಾಗಿದ್ದ ಐಟಿ ಅಧಿಕಾರಿಗಳ ದಾಳಿ ಪ್ರಕ್ರಿಯೆಯು ರಾಕ್‌ಲೈನ್‌ ವೆಂಕಟೇಶ್‌, ಸಿ.ಆರ್‌.ಮನೋಹರ್‌ ಹೊರತು ಪಡಿಸಿ ಇನ್ನುಳಿದವರ ಸ್ಥಳಗಳ ಮೇಲೆ ಮುಕ್ತಾಯಗೊಂಡಿದೆ. ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಮೇಲಿನ ದಾಳಿಯು ಶನಿವಾರ ನಸುಕಿನ ವೇಳೆಗೆ ಮುಕ್ತಾಯವಾದರೆ, ಸುದೀಪ್‌ ಮತ್ತು ಯಶ್‌, ರಾಧಿಕಾ ಪಂಡಿತ್‌ ತಂದೆ ನಿವಾಸ ಸೇರಿದಂತೆ ಇತರರ ಮನೆಗಳ ಮೇಲಿನ ಕಾರ್ಯಾಚರಣೆಯು ಮಧ್ಯಾಹ್ನದ ವೇಳೆಗೆ ಮುಗಿಯಿತು’ ಎಂದು ಐಟಿ ಮೂಲಗಳು ಹೇಳಿವೆ.

ವಿಧಾನಪರಿಷತ್‌ ಸದಸ್ಯರೂ ಆದ ಸಿ.ಆರ್‌.ಮನೋಹರ್‌ ಸೇರಿದ ಸ್ಥಳಗಳ ಮೇಲೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರ ರಾಜಾಜಿನಗರದಲ್ಲಿನ ಕಚೇರಿಗಳಲ್ಲಿ ಕಡತಗಳ ಪರಿಶೀಲನೆ ಕಾರ್ಯವು ತಡರಾತ್ರಿವರೆಗೆ ನಡೆದಿದೆ. ದಾಳಿ ವೇಳೆ ಪತ್ತೆಯಾಗಿದೆ ಎನ್ನಲಾದ ಅಕ್ರಮ ಆಸ್ತಿಯ ಮೌಲ್ಯದ ಬಗ್ಗೆ ಐಟಿ ಅಧಿಕಾರಿಗಳು ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇಡೀ ರಾತ್ರಿ ಜಾಲಾಟ:  ದಾಳಿಗೊಳಗಾದ ನಟ, ನಿರ್ಮಾಪಕರ ಮನೆ, ಕಚೇರಿ ಸೇರಿದಂತೆ ಇತರೆ ಸ್ಥಳಗಳ ಮೇಲೆ ಶುಕ್ರವಾರ ತಡರಾತ್ರಿವರೆಗೆ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಪ್ರತಿಯೊಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಅಧಿಕಾರಿಗಳು ಮತ್ತೊಮ್ಮೆ ಕರೆದು ಹೇಳಿಕೆಗಳ ಪರಾಮರ್ಶೆ ನಡೆಸಲಿದ್ದಾರೆ. ಸಿನಿಮಾದಿಂದ ಬರುವ ಆದಾಯ, ವ್ಯವಹಾರಗಳ ಮೂಲಕ ಬರುವ ಆದಾಯದ ಕುರಿತು ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರತಿ ಪ್ರಶ್ನೆಗಳಿಗೂ ಎಲ್ಲರೂ ಮಾಹಿತಿ ನೀಡಿದ್ದಾರೆ. ವಿಚಾರಣೆ ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಅಪಾರ ಪ್ರಮಾಣದ ಆಸ್ತಿ ಮೌಲ್ಯ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವುಗಳನ್ನು ಸೂಕ್ತವಾಗಿ ಪರಿಶೀಲಿಸಿದ ಬಳಿಕವಷ್ಟೇ ಸ್ಪಷ್ಟಚಿತ್ರಣ ಗೊತ್ತಾಗಲಿದೆ.

ನಗದು, ಚಿನ್ನಾಭರಣ ಮತ್ತು ದಾಖಲೆಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ಅನುಮಾನಾಸ್ಪದ ಬರುವ ದಾಖಲೆ, ನಗ-ನಾಣ್ಯಗಳನ್ನು ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಸೋಮವಾರದ ಬಳಿಕ ಪ್ರತ್ಯೇಕವಾಗಿ ವಿಚಾರಣೆಗೆ ಕರೆಯಲಾಗುವುದು. ಬ್ಯಾಂಕ್‌ ಲಾಕರ್‌ಗಳನ್ನು ಶೋಧಿಸಲಾಗಿದ್ದು, ಅಲ್ಲಿಯೂ ಕೆಲವು ಮಾಹಿತಿ ಲಭ್ಯವಾಗಿದೆ. ಮೂರು ದಿನಗಳಿಂದ ಬೆಂಗಳೂರು ಮತ್ತು ಗೋವಾದ 150ಕ್ಕೂ ಹೆಚ್ಚು ಐಟಿ ಅಧಿಕಾರಿಗಳು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಹಿರಿಯ ಅಧಿಕಾರಿಗಳು ಎಲ್ಲವನ್ನು ಕ್ರೋಡೀಕರಿಸುವಲ್ಲಿ ನಿರತರಾಗಿದ್ದಾರೆ. ಒಬ್ಬ ವ್ಯಕ್ತಿಯ ಹಲವು ಸ್ಥಳಗಳ ಮೇಲೆ ನಡೆದ ದಾಳಿಗಳ ಪ್ರತಿ ವಿವರವನ್ನು ಕಲೆಹಾಕಿ ಒಗ್ಗೂಡಿಸಿ ನಂತರ ಸಮಗ್ರ ವರದಿಯನ್ನು ಸಿದ್ಧಪಡಿಸಲಾಗುವುದು. ಬಳಿಕವಷ್ಟೇ ದಾಳಿಗೊಳಗಾದ ನಟ, ನಿರ್ಮಾಪಕರ ವಿಚಾರಣೆ ನಡೆಸಿ ಪರಮಾರ್ಶೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದಿಲ್ಲಿಯಿಂದಲೂ ಬಂದ ಅಧಿಕಾರಿಗಳು:  ಈ ನಡುವೆ, ಯಶ್‌, ರಾಕ್‌ಲೈನ್‌ ವೆಂಕಟೇಶ್‌ ಸೇರಿದಂತೆ ಇತರರ ನಿವಾಸಗಳಿಗೆ ಐಟಿ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ದೆಹಲಿಯಿಂದ ಆಗಮಿಸಿ ದಾಳಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಲು ನಗರದ ಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ.

ಪುನೀತ್‌ ರಾಜ್‌ ಕುಮಾರ್‌ ಅವರ ಸದಾಶಿವನಗರದ ನಿವಾಸ ಮತ್ತು ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ ಐಟಿ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದು ಬ್ಯಾಂಕ್‌ ಖಾತೆಯ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಆಸ್ತಿಗಳನ್ನು ಹೊಂದಿರುವ ಬಗ್ಗೆ, ಆದಾಯದ ಮೂಲಗಳ ಕುರಿತು ಪ್ರಶ್ನಿಸಿದ್ದಾರೆ. ಮಾನ್ಯತಾ ಟೆಕ್‌ಪಾರ್ಕ್ ಬಳಿ ಇರುವ ಶಿವರಾಜ್‌ಕುಮಾರ್‌ ನಿವಾಸದಲ್ಲಿ ದೊರಕಿರುವ ದಾಖಲೆಗಳನ್ನು ಕೊಂಡೊಯ್ಯಲಾಗಿದೆ. ಪತ್ನಿ ಗೀತಾ ಶಿವರಾಜ್‌ಕುಮಾರ್‌ ಅವರು ರಾಜಕೀಯದಲ್ಲಿ ತೊಡಗಿರುವ ಕಾರಣ ಈ ಸಂಬಂಧ ಪ್ರಶ್ನಿಸಲಾಗಿದೆ. ಪ್ರೊಡಕ್ಷನ್‌ ಹೌಸ್‌ನಿಂದ ಬರುವ ಆದಾಯ ಮತ್ತು ತೆರಿಗೆ ಪಾವತಿಸಿರುವ ಬಗ್ಗೆ ಅವಲೋಕನ ನಡೆಸಲಾಗಿದೆ.

ಸುದೀಪ್‌ ನಿವಾಸ, ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬ್ಯಾಗ್‌ಗಳಲ್ಲಿ ತೆಗೆದುಕೊಂಡಿದ್ದಾರೆ. ವ್ಯವಹಾರದ ವಹಿವಾಟು ಕುರಿತು ಮಾಹಿತಿ ಕಲೆಹಾಕುವಲ್ಲಿ ನಿರತವಾಗಿರುವ ಅಧಿಕಾರಿಗಳಿಗೆ ಕೆಲವು ಉದ್ಯಮದಲ್ಲಿ ಹೂಡಿಕೆ ಮಾಡಿರುವ ವಿಷಯ ಕಂಡುಬಂದಿದೆ ಎಂದು ಹೇಳಲಾಗಿದೆ. ಇನ್ನು ಯಶ್‌ ಮತ್ತು ಪತ್ನಿ ರಾಧಿಕಾರ ಪಂಡಿತ್‌ ತಂದೆ ನಿವಾಸದಲ್ಲಿ ವಿಚಾರಣೆಗೊಳಪಡಿಸಲಾಗಿದೆ. ರಾಧಿಕಾ ಸೀಮಂತದ ವೇಳೆ ಲಭ್ಯವಾದ ಉಡುಗೊರೆ ಬಗ್ಗೆ ಹಾಗೂ ಕುಟುಂಬದ ವ್ಯವಹಾರದ ಬಗ್ಗೆಯೂ ಪ್ರಶ್ನಿಸಿ ಹೇಳಿಕೆ ಪಡೆದುಕೊಳ್ಳಲಾಗಿದೆ.

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಪಕರು ಮಾತ್ರವಲ್ಲದೇ, ಹಲವು ಕಡೆ ಹಣ ಹೂಡಿಕೆ ಮಾಡಿದ್ದಾರೆ. ಥಿಯೇಟರ್‌, ಮಾಲ್‌ಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಪ್ರತಿಯೊಂದರ ಇಂಚಿಂಚೂ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಬಹುತೇಕ ಎಲ್ಲಾ ಸ್ಥಳಗಳನ್ನು ಪೂರ್ಣಗೊಳಿಸಿರುವ ಐಟಿ ಅಧಿಕಾರಿಗಳು ರಾಜಾಜಿನಗರದಲ್ಲಿನ ಕಚೇರಿಯಲ್ಲಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ವ್ಯವಹಾರದ ಲಾಭ-ನಷ್ಟದ ಕುರಿತು ಮಾಹಿತಿ ಪಡೆದುಕೊಂಡಿರುವ ಅಧಿಕಾರಿಗಳು ತೆರಿಗೆ ಪಾವತಿಸಲಾಗಿದೆಯೇ ಎಂಬುದರ ಕುರಿತು ಶೋಧ ನಡೆಸಿದ್ದಾರೆ.

ಸಿ.ಆರ್‌.ಮನೋಹರ್‌ ನಿರ್ಮಾಪಕ ಮಾತ್ರವಲ್ಲದೇ, ಉದ್ಯಮಿಯೂ ಆಗಿರುವ ಕಾರಣ ಹಲವೆಡೆ ಹೂಡಿಕೆ ಮಾಡಿದ್ದು, ಅವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಈ ಹಿಂದೆಯೂ ಒಮ್ಮೆ ಮನೋಹರ್‌ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು ಎಂದು ಐಟಿ ಮೂಲಗಳು ಹೇಳಿವೆ.