ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿರುವ ಖ್ಯಾತ ನಟ ರಜನಿಕಾಂತ್ ಅವರು ಪಕ್ಷದ ಚಟುವಟಿಕೆ ಅಥವಾ ಚುನಾವಣೆ ರಾಜಕೀಯವನ್ನು ಕೇವಲ ತಮಿಳುನಾಡಿಗೆ ಮಾತ್ರ ಸೀಮಿತಗೊಳಿಸುತ್ತಾರೋ ಅಥವಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕರ್ನಾಟಕದಲ್ಲಿ ವಿಸ್ತರಿಸುತ್ತಾರೋ ಎಂಬುದು ಇನ್ನು ಮೇಲಷ್ಟೇ ಸ್ಪಷ್ಟವಾಗಬೇಕಾಗಿದೆ.
ಬೆಂಗಳೂರು (ಜ.1): ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿರುವ ಖ್ಯಾತ ನಟ ರಜನಿಕಾಂತ್ ಅವರು ಪಕ್ಷದ ಚಟುವಟಿಕೆ ಅಥವಾ ಚುನಾವಣೆ ರಾಜಕೀಯವನ್ನು ಕೇವಲ ತಮಿಳುನಾಡಿಗೆ ಮಾತ್ರ ಸೀಮಿತಗೊಳಿಸುತ್ತಾರೋ ಅಥವಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕರ್ನಾಟಕದಲ್ಲಿ ವಿಸ್ತರಿಸುತ್ತಾರೋ ಎಂಬುದು ಇನ್ನು ಮೇಲಷ್ಟೇ ಸ್ಪಷ್ಟವಾಗಬೇಕಾಗಿದೆ. ಒಂದು ವೇಳೆ ಕರ್ನಾಟಕದಲ್ಲಿ ಪಕ್ಷದ ಚಟುವಟಿಕೆ ವಿಸ್ತರಿಸಿದರೆ ಮಾತ್ರ ಬೆಂಗಳೂರು ಹಾಗೂ ತಮಿಳು ಹೆಚ್ಚು ಪ್ರಭಾವ ಇರುವ ಪ್ರದೇಶಗಳ ರಾಜಕೀಯ ಚಿತ್ರಣದ ಮೇಲೆ ಪರಿಣಾಮ ಉಂಟಾಗಬಹುದು. ರಜನಿಕಾಂತ್ ಅವರ ಅಭಿಮಾನಿಗಳು ಕರ್ನಾಟಕದಲ್ಲಿ ಸಾಕಷ್ಟು ಇದ್ದಾರೆ.
ಎಲ್ಲದಕ್ಕಿಂತ ಹೆಚ್ಚಾಗಿ ಮೂಲತಃ ಕನ್ನಡಿಗರೂ ಆಗಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಆದರೆ ಕಾವೇರಿ ನದಿ ನೀರಿನ ವಿಷಯ ಬಂದಾಗ ಸಹಜವಾಗಿ ಅವರು ತಮಿಳುನಾಡು ಪರವಾಗಿ ಇರಲೇಬೇಕಾಗುತ್ತದೆ. ಹೀಗಿರುವಾಗ ಕಾವೇರಿ ನೀರನ್ನು ಅವಲಂಬಿಸಿ ರುವ ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಜನರು ಬೆಂಬಲಿಸುತ್ತಾರೆಂದು ಹೇಳಲು ಸಾಧ್ಯವಿಲ್ಲ.
ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ತಮಿಳುನಾಡಿನ ಕೆಲವು ಸಂಘಟನೆಗಳು, ವ್ಯಕ್ತಿಗಳು ವಿರೋಧ ವ್ಯಕ್ತಪಡಿಸಿ, ರಜನಿಕಾಂತ್ ಕನ್ನಡಿಗ, ಅವರನ್ನು ಬೆಂಬಲಿಸಬಾರದೆಂದು ಕೂಗುತ್ತಿವೆ. ಇಂತಹ ಸಂದರ್ಭದಲ್ಲಿ ತಮಿಳರ ಮನ ಗೆಲ್ಲಲು ಕರ್ನಾಟಕದಲ್ಲಿಯೂ ಪಕ್ಷದ ಚಟುವಟಿಕೆ ಆರಂಭಿಸಿದರೆ ಮಾತ್ರ ಕರ್ನಾಟಕದ ರಾಜಕೀಯದ ಮೇಲೆ ಪರಿಣಾಮ ಬೀಳದೆ ಇರಲಾರದು. ತಮಿಳರ ಹೃದಯ ಗೆದ್ದಿರುವ ರಜನಿಕಾಂತ್ ಅವರನ್ನು ಆರಾಧಿಸುವ ಬಹುದೊಡ್ಡ ಸಮುದಾಯ ರಾಜಧಾನಿಯಲ್ಲಿದೆ.
ವಿಶೇಷವಾಗಿ ಓಕಳಿಪುರ, ಹಲಸೂರು ಸುತ್ತಮುತ್ತ, ಶ್ರೀರಾಂಪುರ, ಪ್ರಕಾಶ್ ನಗರ, ಮಾಗಡಿ ರಸ್ತೆ ಮುಂತಾದ ಕಡೆಗಳಲ್ಲಿ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯವನ್ನು ಸೆಳೆಯಲು ಮೊದಲಿನಿಂದಲೂ ತಮಿಳುನಾಡಿನ ಎಐಎಡಿಎಂಕೆ, ಡಿಎಂಕೆ ಸೇರಿದಂತೆ ಅನೇಕ ಪಕ್ಷಗಳು ಪ್ರತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿ ಇಳಿಸುತ್ತಾ ಬಂದಿದ್ದರೂ ಯಶಸ್ವಿ ಆಗಿಲ್ಲ, ಆದರೆ, ತಮಿಳರ ಮತಗಳನ್ನು ಒಗ್ಗೂಡಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ವಿಶೇಷವಾಗಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಡಿಎಂಕೆ ಪಕ್ಷದ ಕಾರ್ಯಕರ್ತರು ಇದ್ದಾರೆ, ರಜನಿಕಾಂತ್ ಹೊಸ ಪಕ್ಷ ಸ್ಥಾಪನೆ ಹಿನ್ನೆಲೆಯಲ್ಲಿ ಈ ಎರಡು ಪಕ್ಷಗಳ ಕಾರ್ಯಕರ್ತರು ಯಾವ ಕಡೆ ತಿರುಗಬಹುದು ಕಾದು ನೋಡಬೇಕಾಗಿದೆ. ಬಿಜೆಪಿ ಬೆಂಬಲಿಸಿದರೆ ಲಾಭ: ರಜನಿ ಬಿಜೆಪಿ ಬೆಂಬಲಿಸಿದರೆ, ಕರ್ನಾಟಕದ ಬಿಜೆಪಿಗೆ ದೊಡ್ಡ ಬಲ ಬರುತ್ತದೆ.
