ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿದ್ದ ಜಿ.ಟಿ. ದೇವೇಗೌಡರು ಸಿದ್ದರಾಮಯ್ಯ ಅವರು ಕ್ಷೇತ್ರದ ಬಗ್ಗೆ ತಲೆಯೇ ಕೆಡಿಸಿಕೊಳ್ಳದಂತೆ ನೋಡಿಕೊಂಡಿದ್ದರು. ಆದರೆ, ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಜಿ.ಟಿ. ದೇವೇಗೌಡರು ಸಿದ್ದರಾಮಯ್ಯ ಅವರ ಪರ ನಿಲ್ಲದೇ ಜೆಡಿಎಸ್‌ನಲ್ಲೇ ಉಳಿದುಕೊಂಡರು. ಈ ಬಾರಿ ಜಿ.ಟಿ. ದೇವೇಗೌಡ ಜೆಡಿಎಸ್‌ನಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಲು ಮುಂದಾಗಿದ್ದಾರೆ.

ಚಾಮುಂಡೇಶ್ವರಿ, ಚಾಮುಂಡೇಶ್ವರಿ ಮತ್ತು ಚಾಮುಂಡೇಶ್ವರಿ. ಹೀಗೆ ಸದಾ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಗಮನ ಹರಿಸುತ್ತಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ತಮ್ಮ ಸ್ಪರ್ಧೆ ಎಂದು ಠೇಂಕರಿಸುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ. ಆದರೆ, ಅಸಲಿಗೆ ಚಾಮುಂಡೇಶ್ವರಿಯಿಂದಲೇ ಸ್ಪರ್ಧಿಸ್ತಾರಾ? ಅಥವಾ ಇದು ಇನ್ನೊಂದು ರಾಜಕೀಯ ತಂತ್ರವಾ? ಇತ್ತೀಚೆಗೆ ನಡೆದಿರುವ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆಪ್ತ ವಲಯ ಹಾಗೂ ಕಾಂಗ್ರೆಸ್‌ನ ಚಿಂತಕರ ಚಾವಡಿಯ ವಲಯದಲ್ಲಿ ಇಂತಹದೊಂದು ಗುಮಾನಿ ಹುಟ್ಟಿಕೊಂಡಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಕೇವಲ ಘೋಷಣೆ ಮಾಡುತ್ತಿಲ್ಲ. ಆ ಕ್ಷೇತ್ರದಲ್ಲಿ ಸ್ಪರ್ಧಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಗಂಭೀರವಾಗಿಯೇ

ನಡೆಸುತ್ತಿದ್ದಾರೆ. ಪದೇ ಪದೇ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಕ್ಷೇತ್ರದ ಜನರೊಂದಿಗೆ ತಮಗಿರುವ ಭಾವನಾತ್ಮಕ ಸಂಬಂಧವನ್ನು ಗದ್ಗದ ಧ್ವನಿಯಲ್ಲಿ ಹೇಳಿಕೊಳ್ಳುತ್ತಾರೆ. ತಮ್ಮ ವಿರುದ್ಧ ಕ್ಷೇತ್ರದಲ್ಲಿ ಒಂದಾಗುತ್ತಿರುವ ವಿರೋಧಿಗಳಿಗೆ ಗಾಬರಿ ಹುಟ್ಟಿಸುವಷ್ಟರ ಮಟ್ಟಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ. ಇಷ್ಟಾದರೂ ಅವರು ಚಾಮುಂಡೇಶ್ವರಿ ಕ್ಷೇತ್ರವೇ ಈ ಬಾರಿ ಅವರ ಕದನ ಕಣವಾಗಲಿದೆಯೇ ಅಥವಾ ಇದು ವಿರೋಧಿಗಳ ಹಾದಿ ತಪ್ಪಿಸಲು ಅವರು ಹೆಣೆದಿರುವ ರಾಜಕೀಯ ತಂತ್ರವೇ ಎಂಬ ಗುಮಾನಿಯಿದೆ. ಕಡೆ ಕ್ಷಣದವರೆಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ವಿರೋಧಿಗಳ ಹಾದಿ ತಪ್ಪಿಸಿ ಅಂತಿಮವಾಗಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್'ನ ಉನ್ನತ ಮೂಲಗಳು ಸುವರ್ಣ ಸೋದರ ಪತ್ರಿಕೆ ಕನ್ನಡಪ್ರಭಕ್ಕೆ ತಿಳಿಸಿವೆ.

ಸಿದ್ದು ಲೆಕ್ಕಾಚಾರ

ತಮ್ಮ ರಾಜಕೀಯ ಜೀವನದ ಔನ್ನತ್ಯ ಕಾಲದಲ್ಲೇ ಪುತ್ರ ಡಾ. ಯತೀಂದ್ರ ಅವರಿಗೆ ರಾಜಕೀಯ ಪ್ರವೇಶ ದೊರಕಿಸಿಕೊಡುವ ಉದ್ದೇಶ ಸಹಜವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ. ಹೀಗಾಗಿಯೇ ವರುಣಾ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯಮಂತ್ರಿ ಯವರು ಪುತ್ರ ಡಾ. ಯತೀಂದ್ರ ಅವರಿಗೆ ಬಿಟ್ಟುಕೊಟ್ಟು, ತಾವು ಸಂಪೂರ್ಣವಾಗಿ ಚಾಮುಂಡೇಶ್ವರಿ ಕ್ಷೇತ್ರದ ಆಗು-ಹೋಗುಗಳ ನಿಗಾವಹಿಸಿದ್ದಾರೆ (ಅಥವಾ ನಿಗಾ ವಹಿಸಿದಂತೆಬಿಂಬಿಸುತ್ತಿದ್ದಾರೆ). ಕಳೆದ ಆರು ತಿಂಗಳ ಹಿಂದಿನಂದಲೂ ನಡೆದಿರುವ ಈ ಬೆಳವಣಿಗೆಯನ್ನು ಗಮನಿಸಿರುವ ಪ್ರತಿಪಕ್ಷಗಳು ಸಹ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲೇ ಸ್ಪರ್ಧಿಸುತ್ತಾರೆ ಎಂದು ನಿರೀಕ್ಷಿಸಿ,ಮೂಲದಲ್ಲೇ ಅವರಿಗೆ ಸೋಲುಣಿಸಲು ತಂತ್ರಗಳನ್ನು ರೂಪಿಸತೊಡಗಿವೆ.

ಈ ಕ್ಷೇತ್ರದ ಮಟ್ಟಿಗೆ ಜೆಡಿಎಸ್‌ನ ಸ್ಪರ್ಧಿಯಾಗಲಿರುವ ಜಿ.ಟಿ. ದೇವೇಗೌಡರಿಗೆ ತಮ್ಮ ಬಲವನ್ನು ತುಂಬಲು ಎಚ್. ವಿಶ್ವನಾಥ್ ಹಾಗೂ ಬಿಜೆಪಿಯ ಶ್ರೀನಿವಾಸ ಪ್ರಸಾದ್ ಅವರು ಮುಂದಾಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರು, ಕುರುಬರು, ನಾಯಕರು ಹಾಗೂ ದಲಿತರು ಉತ್ತಮ ಸಂಖ್ಯೆಯಲ್ಲಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರು ಈ ಕ್ಷೇತ್ರದಿಂದಲೇ ಸ್ಪರ್ಧಿಸಿದರೆ ಆಗ ಅತ್ಯಂತ ತುರುಸಿನ ಸ್ಪರ್ಧೆ ಏರ್ಪಡುವುದು ಖಚಿತ. ಏಕೆಂದರೆ, ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಸಂಪರ್ಕ ಜಾಲವನ್ನು ಹೊಂದಿರುವ ಜಿ.ಟಿ. ದೇವೇಗೌಡ ಒಕ್ಕಲಿಗರ ಮತಬುಟ್ಟಿಗೆ ಕೈ ಹಾಕಿದರೆ ಮತ್ತು ಸಿದ್ದರಾಮಯ್ಯ ಅವರನ್ನು ಕುರುಬರು ಕೈ ಬಿಡುವುದಿಲ್ಲ ಎಂದು ಭಾವಿಸಿದರೆ ಆಗ ದಲಿತ ಮತ್ತು ನಾಯಕರ ಮತಗಳು ನಿರ್ಣಾಯಕವಾಗುತ್ತವೆ.

ಕ್ಷೇತ್ರದ ದಲಿತರಲ್ಲಿ ಉತ್ತಮ ಹಿಡಿತ ಹೊಂದಿರುವ ಶ್ರೀನಿವಾಸಪ್ರಸಾದ್ ಹಾಗೂ ವಿಶ್ವನಾಥ್ ಸ್ವಲ್ಪವಾದರೂ ಮತಗಳನ್ನು ಜಿ.ಟಿ.ದೇವೇಗೌಡ ಪರ ಸೆಳೆದುಬಿಟ್ಟರೆ ಆಗ ಸಿದ್ದರಾಮಯ್ಯ ಅವರಿಗೆ ಕಷ್ಟಕರವಾಗಬಹುದು. ದೇವೇಗೌಡ ಪರ ಈಗಾಗಲೇ ಬೀದಿಗಿಳಿದಿರುವ ವಿಶ್ವನಾಥ್ ಹಾಗೂ ತಮ್ಮ ಬೆಂಬಲಿಗರ ಮೂಲಕ ದಲಿತರಿಗೆ ಸಂದೇಶ ರವಾನಿಸುವಲ್ಲಿ ಶ್ರೀನಿವಾಸ ಪ್ರಸಾದ್ ತೊಡಗಿರುವುದು ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದೆ. ಇದಿಷ್ಟೇ ಅಲ್ಲದೆ, ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಮ್ಮ ಕರ್ನಾಟಕ ವಿಕಾಸ ಯಾತ್ರೆಯನ್ನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಆರಂಭಿಸಿದ್ದು ಮತ್ತು ಆ ಯಾತ್ರೆಗೆ ಸುಮಾರು 25 ಸಾವಿರ ಜನರು ಸೇರಿದ್ದು ಜಿ.ಟಿ. ದೇವೇಗೌಡರಿಂದಲೇ ಎಂಬುದು ಸಿಎಂ ಅವರಿಗೆ ಮನದಟ್ಟಾಗಿದೆ ಎನ್ನುತ್ತವೆ ಮೂಲಗಳು. ಅಂದರೆ, ಚಾಮುಂಡೇಶ್ವರಿಯಲ್ಲಿ ಪ್ರಬಲ ಶಕ್ತಿಗಳು ತಮ್ಮ ವಿರುದ್ಧ ಒಗ್ಗೂಡಿವೆ ಎಂಬುದು ಸಿಎಂ ಅವರ ಗಮನಕ್ಕೆ ಬಂದಿದೆ. ಆದರೆ, ಇಡೀ ಸರ್ಕಾರವೇ ಎದುರು ನಿಂತಾಗಲೂ ಅವರು ಬೆದರದೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಉಪಚುನಾವಣೆಯಲ್ಲಿ ಗೆದ್ದಿದ್ದರು. ಆದರೆ, ಆ ಗೆಲುವು ಕೇವಲ 257 ಮತಗಳ ಅಂತರದ ಗೆಲುವಾಗಿತ್ತು ಮತ್ತು ಆಗ ಅವರ ವಿರುದ್ಧ ನಿಂತಿದ್ದವರು ಜೆಡಿಎಸ್ ನಿಂದ ಶಿವಬಸಪ್ಪ ಎಂಬ ದುರ್ಬಲ ಅಭ್ಯರ್ಥಿ.

ಆದರೆ, ಈ ಬಾರಿ ತಮ್ಮ ಎಲ್ಲಾ ಪಟ್ಟುಗಳನ್ನು ಬಲ್ಲ ಹಾಗೂ ಒಂದು ಕಾಲದ ತಮ್ಮ ಬಲಗೈಯಂತಿದ್ದ ಜಿ.ಟಿ.ದೇವೇಗೌಡರೇ ನೇರ ಸ್ಪರ್ಧಿ. ಹೀಗಾಗಿ ಇಂತಹ ರಿಸ್ಕ್ ತೆಗೆದುಕೊಳ್ಳಬೇಕೇ ಎಂಬ ಚಿಂತನೆ ಅವರ ಆಪ್ತವಲಯದಲ್ಲಿದೆ. ಜತೆಗೆ, ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ಡಾ.ಯತೀಂದ್ರ ಅವರನ್ನು ಕಣಕ್ಕೆ ಇಳಿಸುವ ಅವರ ಆಲೋಚನೆಯೂ ಸಿಎಂ ಅವರು ಅಂದುಕೊಂಡಷ್ಟು ಫಲಕೊಟ್ಟಂತೆ ಕಾಣುತ್ತಿಲ್ಲ. ವಾಸ್ತವವಾಗಿ ಸಿದ್ದರಾಮಯ್ಯ ವರುಣಾ ಕ್ಷೇತ್ರವನ್ನು ತಮ್ಮ ಹಿರಿಯ ಪುತ್ರ ರಾಕೇಶ್‌ಗೆ ಬಿಟ್ಟುಕೊಟ್ಟಿದ್ದರು. ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ರಾಕೇಶ್ ಕೂಡ ಕ್ಷೇತ್ರದಲ್ಲಿ ತಮ್ಮ ಹತೋಟಿ ಸಾಧಿಸಿದ್ದರು. ಆದರೆ, ಅವರ ಅಕಾಲಿಕ ಮರಣದ ಕಾರಣ ಡಾ. ಯತೀಂದ್ರ ರಾಜಕೀಯ ಪ್ರವೇಶ ಮಾಡುವಂತಾಯಿತು. ವೈದ್ಯಕೀಯ ಕ್ಷೇತ್ರ ಹಿನ್ನೆಲೆಯ ಯತೀಂದ್ರ ಅವರು ರಾಜಕೀಯಕ್ಕೆ ಹೊಂದಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಿದೆ ಎಂಬ ಭಾವನೆ ಅವರ ಆಪ್ತವಲಯದಲ್ಲೇ ಇದೆ.

ಇದು ನಿಜವಾಗಿದ್ದರೆ, ವರುಣಾ ಕ್ಷೇತ್ರ ಹಾಗೂ ಚಾಮುಂಡೇಶ್ವರಿ ಕ್ಷೇತ್ರ ಎರಡರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗಮನಹರಿಸಬೇಕಾಗುತ್ತದೆ. ಕಾಂಗ್ರೆಸ್‌ನ ಚುನಾವಣಾ ನೇತೃತ್ವ ವಹಿಸಿಕೊಂಡು,ಪುತ್ರನ ಕ್ಷೇತ್ರಕ್ಕೂ ಕಾರ್ಯತಂತ್ರ ರೂಪಿಸಿ,ಚಾಮುಂಡೇಶ್ವರಿಯಂತಹ ಪ್ರಬಲ ಪೈಪೋಟಿಯಿರುವ ಕ್ಷೇತ್ರದಲ್ಲಿ ಕಣಕ್ಕಿಳಿಯುವಂತಹ ದೊಡ್ಡ ರಿಸ್ಕ್'ಅನ್ನು ಮುಖ್ಯಮಂತ್ರಿ ತೆಗೆದುಕೊಳ್ಳುವರೇ ಎಂಬುದು ಯಕ್ಷಪ್ರಶ್ನೆ. ಹೀಗಾಗಿಯೇ ಇದು ವಿರೋಧಿಗಳನ್ನು ಹಾದಿ ತಪ್ಪಿಸಲು ಸಿದ್ದರಾಮಯ್ಯ ರೂಪಿಸಿದ ರಾಜಕೀಯ ತಂತ್ರ. ಅಂತಿಮವಾಗಿ ಅವರು ಪ್ರಯೋಗಿಸಲಿರುವ ರಾಜಕೀಯ ದಾಳವೇ ಭಿನ್ನವಿರಲಿದೆ ಎನ್ನುತ್ತವೆ ಅವರ ಆಪ್ತ ಮೂಲಗಳು.

ಕೈಕೊಟ್ಟಿತೆ ಮುಖ್ಯಮಂತ್ರಿ ತಂತ್ರ

ವಾಸ್ತವವಾಗಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಿಂದ ಸ್ಪರ್ಧಿಸುವ ಉದ್ದೇಶವೇ ಇರಲಿಲ್ಲ. ಅದು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದುರುಳಿಸುವ ತಂತ್ರ ಮಾತ್ರವಾಗಿತ್ತು ಎನ್ನುತ್ತವೆ ಮೂಲಗಳು. ಈ ಮೂಲಗಳ ಪ್ರಕಾರ ತಮ್ಮ ವಿರೋಧಿ ಎಚ್. ವಿಶ್ವನಾಥ್‌ಗೆ ಮರ್ಮಾಘಾತ ನೀಡುವ ಉದ್ದೇಶವನ್ನು ಹೊಂದಿದ್ದ ತಂತ್ರ. ಆದರೆ, ಆ ತಂತ್ರ ಕೈಕೊಟ್ಟಿದೆ ಎನ್ನಲಾಗುತ್ತಿದೆ.

ಚಾಮುಂಡೇಶ್ವರಿ ಸಿದ್ದರಾಮಯ್ಯ ಅವರ ಮೂಲ ಕ್ಷೇತ್ರ. ಜೆಡಿಎಸ್‌ನಲ್ಲಿ ಇದ್ದಷ್ಟು ದಿನ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಸುಲಭವಾಗಿ ಒಲಿಯುವಂತೆ ನೋಡಿಕೊಳ್ಳುತ್ತಿದ್ದವರು ಜಿ.ಟಿ. ದೇವೇಗೌಡ. ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿದ್ದ ಜಿ.ಟಿ. ದೇವೇಗೌಡರು ಸಿದ್ದರಾಮಯ್ಯ ಅವರು ಕ್ಷೇತ್ರದ ಬಗ್ಗೆ ತಲೆಯೇ ಕೆಡಿಸಿಕೊಳ್ಳದಂತೆ ನೋಡಿಕೊಂಡಿದ್ದರು. ಆದರೆ, ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಜಿ.ಟಿ. ದೇವೇಗೌಡರು ಸಿದ್ದರಾಮಯ್ಯ ಅವರ ಪರ ನಿಲ್ಲದೇ ಜೆಡಿಎಸ್‌ನಲ್ಲೇ ಉಳಿದುಕೊಂಡರು.ಈ ಬಾರಿ ಜಿ.ಟಿ. ದೇವೇಗೌಡ ಜೆಡಿಎಸ್‌ನಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಲು ಮುಂದಾಗಿದ್ದಾರೆ.

ಒಂದು ವೇಳೆ ಸಿದ್ದರಾಮಯ್ಯ ಅವರೇ ಕ್ಷೇತ್ರಕ್ಕೆ ಬಂದು ಬಿಟ್ಟರೆ, ಇಡೀ ಆಡಳಿತ ಯಂತ್ರ ಅವರ ಪರವಾಗಿ ನಿಂತರೆ ಸೋಲುಂಟಾಗಬಹುದು ಎಂಬ ಭೀತಿಯಿಂದ ಜಿ.ಟಿ. ದೇವೇಗೌಡ ಚಾಮುಂಡೇಶ್ವರಿ ಬದಲಿಗೆ ಹುಣಸೂರು ಕ್ಷೇತ್ರಕ್ಕೆ ವಲಸೆ ಹೋಗಲಿ ಎಂಬ ಬಯಕೆಯೂ ಸಿದ್ದರಾಮಯ್ಯ ಅವರಿಗೆ ಇತ್ತು ಎನ್ನಲಾಗುತ್ತಿದೆ. ದೇವೇಗೌಡ ಹುಣಸೂರು ಕ್ಷೇತ್ರಕ್ಕೆ ವಲಸೆ ಹೋಗಿದ್ದರೆ, ಆಗ ಹುಣಸೂರಿನಲ್ಲಿ ಜೆಡಿಎಸ್ ಟಿಕೆಟ್‌ನಿಂದ ಕಣಕ್ಕಿಳಿಯಬಯಸಿದ್ದ ಸಿದ್ದರಾಮಯ್ಯ ಅವರ ಮತ್ತೊಬ್ಬ ವಿರೋಧಿ ಎಚ್.ವಿಶ್ವನಾಥ್ ರಾಜಕೀಯ ಜೀವನವೇ ಹಳಿ ತಪ್ಪುತ್ತಿತ್ತು. ಆದರೆ, ಈ ತಂತ್ರವನ್ನು ಅರ್ಥ ಮಾಡಿಕೊಂಡ ಜೆಡಿಎಸ್ ವರಿಷ್ಠರು ಜಿ.ಟಿ. ದೇವೇಗೌಡರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ಮನವೊಲಿಸಿದರು. ಹೀಗಾಗಿ ಸಿದ್ದರಾಮಯ್ಯ ಅವರ ತಂತ್ರ ನಡೆಯಲಿಲ್ಲ ಎನ್ನತ್ತವೆ ಮೂಲಗಳು.

- ಎಸ್. ಗಿರೀಶ್ ಬಾಬು, ಕನ್ನಡಪ್ರಭ