ರಾಣೆಬೆನ್ನೂರಿನಿಂದ ಸ್ಪರ್ಧಿಸುವ ಲೆಕ್ಕಾಚಾರದಲ್ಲಿ ರಾಘವೇಂದ್ರ | ಲೋಕಸಭೆ ಚುನಾವಣೆ ಮೇಲೂ ಕಣ್ಣು: ಟಿಕೆಟ್ ಸಿಗುತ್ತಾ?
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರರೂ ಆಗಿರುವ ಹಾಲಿ ಶಿಕಾರಿಪುರದ ಶಾಸಕ ಬಿ.ವೈ.ರಾಘವೇಂದ್ರ ಅವರ ಮುಂದಿನ ರಾಜಕೀಯ ಹೆಜ್ಜೆ ಅಸ್ಪಷ್ಟವಾಗಿದ್ದು, ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸುತ್ತಾರೋ ಅಥವಾ ಸಂಸತ್ತಿಗೆ ಮರಳುತ್ತಾರೋ ಎಂಬುದು ಕುತೂಹಲಕರವಾಗಿದೆ.
ಯಡಿಯೂರಪ್ಪ ಅವರಿಗೆ ತಮ್ಮ ಪುತ್ರನನ್ನು ರಾಜ್ಯ ರಾಜಕಾರಣದಲ್ಲೇ ಮುಂದುವರೆಸುವ ಒಲವಿದೆ. ವಿಧಾನಸಭಾ ಚುನಾವಣೆ ನಂತರ ರಾಜಕೀಯ ಪರಿಸ್ಥಿತಿ ಹೆಚ್ಚೂ ಕಡಮೆಯಾದಲ್ಲಿ ಪುತ್ರನಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು ಎಂಬ ಸಹಜ ಬಯಕೆಯನ್ನು ಅವರು ಹೊಂದಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಅವರು ಈ ಬಾರಿ ಶಿಕಾರಿಪುರ ತೊರೆದು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಯಾವುದಾದರೊಂದು ಕ್ಷೇತ್ರಕ್ಕೆ ವಲಸೆ ಹೋಗುತ್ತಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಬಲವಾಗಿ ಹಬ್ಬಿತ್ತು. ಒಂದು ಹಂತದಲ್ಲಿ ಇದನ್ನು ಸ್ವತಃ ಯಡಿಯೂರಪ್ಪ ಅವರೇ ಖಚಿತಪಡಿಸಿದರು.
ಹೀಗಾಗಿ, ರಾಘವೇಂದ್ರ ಅವರು ಶಿಕಾರಿಪುರದಿಂದಲೇ ಮತ್ತೆ ಕಣಕ್ಕಿಳಿಯುವುದಕ್ಕೆ ಹಾದಿ ಸುಗಮವಾಗಿತ್ತು. ಆದರೆ, ಇತ್ತೀಚೆಗೆ ಯಡಿಯೂರಪ್ಪ ಅವರು ರಾಜಕೀಯ ಲೆಕ್ಕಾಚಾರಗಳನ್ನು ಆಧರಿಸಿ ಕ್ಷೇತ್ರ ಬದಲಿಸಲು ಹಿಂಜರಿದು ಶಿಕಾರಿಪುರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದರು. ಇದರಿಂದ ರಾಘವೇಂದ್ರ ಅವರ ರಾಜಕೀಯ ಭವಿಷ್ಯ ಮತ್ತೆ ಡೋಲಾಯಮಾನವಾಯಿತು.
ಮೇಲ್ನೋಟಕ್ಕೆ ಯಡಿಯೂರಪ್ಪ ಅವರು ಶಿಕಾರಿಪುರದಿಂದ ಸ್ಪರ್ಧಿಸಿದಲ್ಲಿ ಅಪ್ಪ ಮಗನ ಸ್ಥಾನ ಅದಲು ಬದಲಾಗಬಹುದು ಎಂಬ ಮಾತು ಕೇಳಿ ಬರುತ್ತಿದೆಯಾದರೂ ಅದು ಅಷ್ಟು ಸುಲಭವಾಗಿಲ್ಲ.
ಪಕ್ಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯಿದೆ. ಆ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ರಾಘವೇಂದ್ರ ಅವರು ಕಳೆದ ಹಲವು ತಿಂಗಳುಗಳಿಂದಲೇ ಲೆಕ್ಕಾಚಾರ ಹಾಕಿ, ತೆರೆಮರೆಯ ಕಸರತ್ತನ್ನೂ ಆರಂಭಿಸಿದ್ದರು.
ಅದಕ್ಕಾಗಿಯೇ ಶಿಕಾರಿಪುರ ಕ್ಷೇತ್ರದ ಜತೆಗೆ ರಾಣೆಬೆನ್ನೂರು ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ರಾಘವೇಂದ್ರ ಅವರನ್ನೇ ನೇಮಿಸಲಾಗಿದೆ. ಹಲವು ಬಾರಿ ರಾಣೆಬೆನ್ನೂರು ಕ್ಷೇತ್ರಕ್ಕೆ ಭೇಟಿ ನೀಡಿರುವ ರಾಘವೇಂದ್ರ ಅವರು ಅಲ್ಲಿನ ರಾಜಕೀಯ ಪರಿಸ್ಥಿತಿ, ಜಾತಿ ಸಮೀಕರಣದ ಬಗ್ಗೆ ಬೆಂಬಲಿಗರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ.
ಈ ಬಾರಿ ಹಾಲಿ ಶಾಸಕರೂ ಆಗಿರುವ ಕೆ.ಬಿ. ಕೋಳಿವಾಡ ಅವರು ತಮ್ಮ ಪುತ್ರ ಪ್ರಕಾಶ್ ಕೋಳಿವಾಡ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವಿನ ಅಂಚಿಗೆ ಬಂದಿದ್ದ ಬೆಂಗಳೂರಿನ ಮಾಜಿ ಉಪಮೇಯರ್ ಆರ್.ಶಂಕರ್ ಈ ಬಾರಿಯೂ ಸ್ಪರ್ಧಿಸುವುದು ನಿಚ್ಚಳ. ಶಂಕರ್ ಮತ್ತಷ್ಟು ಬಲಗೊಂಡಿರುವುದು ರಾಘವೇಂದ್ರ ಅವರಲ್ಲಿ ಹಿಂಜರಿಕೆ ತಂದಿದೆ ಎಂಬ ಮಾತು ಕೇಳಿಬಂದಿದೆ.
ಇದೆಲ್ಲದರ ನಡುವೆ ಸ್ವತಃ ರಾಘವೇಂದ್ರ ಅವರಿಗೂ ತಾವು ಶಾಸಕನಾಗುವುದಕ್ಕಿಂತ ಲೋಕಸಭಾ ಸದಸ್ಯನಾಗಿರುವುದೇ ಸೂಕ್ತ ಎಂಬ ಅನಿಸಿಕೆ ಇದೆ ಎಂದೂ ತಿಳಿದು ಬಂದಿದೆ. ಆದರೆ, ಲೋಕಸಭಾ ಚುನಾವಣೆಯ ಟಿಕೆಟ್ ಪಡೆಯುವ ಹಾದಿಯೇನೂ ಸುಗಮವಾಗಿಲ್ಲ. ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ವಿಧಾನಸಭಾ ಅಥವಾ ವಿಧಾನಪರಿಷತ್ತಿಗೆ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರ ಬಳಿ ಬೇಡಿಕೆ ಇಟ್ಟಿದ್ದಾರೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ (ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೋತಿರುವ ಕ್ಷೇತ್ರ) ಅಥವಾ ಬರುವ ಜೂನ್‌ನಲ್ಲಿ ಎದುರಾಗಲಿರುವ ವಿಧಾನಪರಿಷತ್ತಿನ ಪದವೀಧರರ ಕ್ಷೇತ್ರಕ್ಕೆ ಸ್ಪರ್ಧಿಸಲು ಆಸಕ್ತರಾಗಿದ್ದಾರೆ. ಇವೆರಡಕ್ಕೂ ಸಾಧ್ಯವಾಗದಿದ್ದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವೆ ಎಂಬ ಮಾತನ್ನೂ ಅವರು ಹೇಳಿದ್ದಾರೆ.
ಈ ನಡುವೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರನ್ನು ಕಾಂಗ್ರೆಸ್ಸಿನಿಂದ ಕರೆತಂದಿರುವುದರಿಂದ ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಸ್ಪಷ್ಟತೆಯಿಲ್ಲ. ಸೊರಬ ಅಥವಾ ಸಾಗರದಿಂದ ಕಣಕ್ಕಿಳಿಸುವ ಆಲೋಚನೆ ಯಡಿಯೂರಪ್ಪ ಅವರಿಗಿದ್ದರೂ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವುದು ಉತ್ತಮ ಎಂಬ ಅಭಿಪ್ರಾಯವನ್ನು ಪಕ್ಷದ ಕೆಲವು ಮುಖಂಡರು ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಆಯನೂರು ಮಂಜುನಾಥ್ ಮತ್ತು ಕುಮಾರ್ ಬಂಗಾರಪ್ಪ ಅವರ ರಾಜಕೀಯ ಭವಿಷ್ಯ ನಿಚ್ಚಳವಾದಲ್ಲಿ ರಾಘವೇಂದ್ರ ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಸುಗಮ ವಾಗಬಹುದು. ಇಲ್ಲವಾದಲ್ಲಿ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ಮೂಲಗಳು ತಿಳಿಸಿವೆ.
