Asianet Suvarna News Asianet Suvarna News

ಬಿಜೆಪಿ ಒಳಜಗಳ: ಅತೃಪ್ತರ ಗುರಿ ಸಂತೋಷ್‌ ಕರೆತರುವುದೇ?

ರಾಷ್ಟ್ರೀಯ ಜವಾಬ್ದಾರಿ ಹೊತ್ತಿರುವ ಆರೆಸ್ಸೆಸ್‌ ನಾಯಕನ ಕರೆತರಲು ಆಸಕ್ತಿ | ಸಂತೋಷ್‌'ಗೂ ಇಷ್ಟ

What do BJP dissidents want

ಬೆಂಗಳೂರು: ಪದಾಧಿಕಾರಿಗಳ ನೇಮಕ ಕುರಿತ ಅಸಮಾಧಾನವನ್ನು ಮುಂದಿಟ್ಟುಕೊಂಡು ಬಹಿರಂಗವಾಗಿ ಸಭೆ ನಡೆಸುವ ಮಟ್ಟಕ್ಕೆ ಬಂದು ನಿಂತಿರುವ ಅತೃಪ್ತ ಮುಖಂಡರ ನಿಜವಾದ ಉದ್ದೇಶ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಮತ್ತೆ ರಾಜ್ಯ ರಾಜಕಾರಣಕ್ಕೆ ಕರೆತರುವುದು ಎಂಬ ಮಾತು ಕೇಳಿಬರುತ್ತಿದೆ.

What do BJP dissidents want

ಸಂತೋಷ್‌ ಅವರು ತಂತ್ರಗಾರಿಕೆಯಲ್ಲಿ ನಿಪುಣರು. ಅವರು ರಾಜ್ಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ನಿರ್ವಹಿಸಬೇಕು ಎಂಬ ಆಶಯ ಅತೃಪ್ತ ಮುಖಂಡರದ್ದು. ಇದೇ ವೇಳೆ ಸ್ವತಃ ಸಂತೋಷ್‌ ಅವರಿಗೂ ರಾಜ್ಯ ರಾಜಕಾರಣದಲ್ಲಿ ಆಸಕ್ತಿಯಿದ್ದು, ಅಂಥ ಸನ್ನಿವೇಶ ನಿರ್ಮಾಣವಾದಲ್ಲಿ ಅಧಿಕಾರಯುತ ಸ್ಥಾನವನ್ನೂ ಪಡೆಯಬೇಕು ಎಂಬ ಆಸೆಯೂ ಇದೆ ಎಂಬ ಸುದ್ದಿ ಬಿಜೆಪಿ ಪಾಳೆಯದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ.
ಸಂತೋಷ್‌ ಅವರು ವಾಪಸ್‌ ಬಂದಲ್ಲಿ ಯಡಿಯೂರಪ್ಪ ಅವರ ಏಕಪಕ್ಷೀಯ ಧೋರಣೆಗೆ ಕಡಿವಾಣ ಹಾಕಬಹುದು. ಜತೆಗೆ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ನಾಯಕತ್ವ ರೂಪಿಸಬಹುದು ಎಂಬ ಉದ್ದೇಶವೂ ಅತೃಪ್ತ ಮುಖಂಡರಲ್ಲಿದೆ ಎಂದು ತಿಳಿದು ಬಂದಿದೆ.

ಹಿಂದೆ ಯಡಿಯೂರಪ್ಪ ಅವರು ಪಕ್ಷ ತೊರೆದು ಕೆಜೆಪಿ ಕಟ್ಟಿದ ವೇಳೆ ಬಿಜೆಪಿಯ ಬುಡ ಅಲುಗಾಡದಂತೆ ನೋಡಿಕೊಳ್ಳುವುದರಲ್ಲಿ ಸಂತೋಷ್‌ ಅವರ ಪಾತ್ರ ಮಹತ್ವದ್ದು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಸುಮಾರು ಏಳೆಂಟು ವರ್ಷಗಳ ಕಾಲ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿದ್ದ ಸಂತೋಷ್‌ ಅವರು ಆಗ ಇದ್ದ ರಾಜ್ಯಾಧ್ಯಕ್ಷರಿಗೆ ಪರ್ಯಾಯ ಎಂಬಂತೆಯೇ ವರ್ಚಸ್ಸು ಹೊಂದಿದ್ದರು. ಪಕ್ಷದ ಪ್ರಮುಖ ತೀರ್ಮಾನಗಳು ಸಂತೋಷ್‌ ಅವರನ್ನು ಹೊರತುಪಡಿಸಿ ತೆಗೆದು​ಕೊಳ್ಳುವುದಕ್ಕೆ ಸಾಧ್ಯ​ವಾಗುತ್ತಿರಲಿಲ್ಲ.

ಯಡಿಯೂ​ರಪ್ಪ ಅವರು ಮುಖ್ಯ​ಮಂತ್ರಿ​ಯಾದ ನಂತರ ಸಂತೋಷ್‌ ಅವರೊಂದಿಗೆ ಆಂತರಿಕ ತಿಕ್ಕಾಟ ಆರಂಭವಾಯಿತು. ಸಂತೋಷ್‌ ಅವರು ತಮಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮಬಹುದು ಎಂಬ ಆತಂಕ ಆಗಿನಿಂದಲೇ ಯಡಿಯೂರಪ್ಪ ಅವರಲ್ಲಿ ಮನೆ ಮಾಡಿತು. ನಂತರ ಯಡಿಯೂರಪ್ಪ ಅವರು ಕೆಜೆಪಿಯಿಂದ ವಾಪಸ್‌ ಬಂದು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ವೇಳೆ ರಾಜ್ಯ ನಾಯಕರು ಕೇವಲ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾತ್ರ ಘೋಷಿಸುವಂತೆ ವರಿಷ್ಠರಿಗೆ ಸಲಹೆ ನೀಡಿದ್ದರು. ಅಂದರೆ, ಪಕ್ಷದ ಜವಾಬ್ದಾರಿ ಬೇರೊಬ್ಬರಿಗೆ ನೀಡಲಿ ಎಂಬ ಉದ್ದೇಶವಿತ್ತು.

ಇದರ ಹಿಂದೆಯೂ ಸಂತೋಷ್‌ ಅವರ ಪಾತ್ರವಿತ್ತು ಎಂಬುದು ಯಡಿಯೂರಪ್ಪ ಆಪ್ತರ ಆರೋಪ. ಅದೆಲ್ಲದರ ನಂತರ ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದು ಬಿಜೆಪಿ ಗೆದ್ದ ಮೇಲೆ ಆ ರಾಜ್ಯಗಳಲ್ಲಿ ಜನಪ್ರಿಯ ನಾಯಕರನ್ನು ಕೈಬಿಟ್ಟು ಸಂಘ ಪರಿವಾರದ ಮೂಲದ ವ್ಯಕ್ತಿಗಳನ್ನೇ ಮುಖ್ಯಮಂತ್ರಿ ಮಾಡಿದಾಗ ಮುಂದೆ ಕರ್ನಾಟಕದಲ್ಲೂ ಸಂತೋಷ್‌ ಅವರು ಮುಖ್ಯಮಂತ್ರಿಯಾಗಬಹುದು ಎಂಬ ಮಾತು ಕೇಳಿಬಂದಿತ್ತು. ಅದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾ ಣದಲ್ಲಿ ಸಂತೋಷ್‌ ಪರವಾಗಿ ವಾದವೂ ಕೇಳಿಬಂತು. ಅದಕ್ಕೆ ಸಂತೋಷ್‌ ಅವರ ಯಾವುದೇ ಪ್ರತಿಕ್ರಿಯೆಯೂ ಇರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಸಮಿತಿ ಪುನಾರಚನೆ ವೇಳೆ ಯಡಿಯೂರಪ್ಪ ಅವರು ಪಟ್ಟು ಹಿಡಿದು ಸಂತೋಷ್‌ ಅವರನ್ನು ರಾಷ್ಟ್ರೀಯ ಸಮಿತಿಗೆ ಕಳುಹಿಸುವಂತೆ ನೋಡಿಕೊಂಡರು. ಸಂತೋಷ್‌ ಅವರಿಗೆ ರಾಜ್ಯದ ಸಂಘಟನೆ ತೊರೆಯುವುದು ಇಷ್ಟವಿರಲಿಲ್ಲ ವಾದರೂ ಅನಿವಾರ್ಯವಾಯಿತು. ಇದು ಸಂತೋಷ್‌ ಅವರಲ್ಲಿ ಕೋಪ ಉಂಟು ಮಾಡಿತ್ತು ಎನ್ನಲಾಗುತ್ತಿದೆ.

ಇದೆಲ್ಲದರ ನಡುವೆ ಪದಾಧಿಕಾರಿಗಳ ನೇಮಕ ವೇಳೆ ಸಂತೋಷ್‌ ಅವರು ಸೂಚಿಸಿದವರನ್ನು ಯಡಿಯೂರಪ್ಪ ಕಡೆಗಣಿಸಿದ್ದರು. ಇದು ಇವರಿಬ್ಬರ ನಡುವಿನ ಕಂದರ ಹೆಚ್ಚಾಗಲು ಕಾರಣವಾಯಿತು. ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ಸಂತೋಷ್‌ ಜತೆ ರಾಜ್ಯ ರಾಜಕಾರಣ ಕುರಿತಂತೆ ಯಾವುದೇ ಚರ್ಚೆ ನಡೆಸುತ್ತಿರಲಿಲ್ಲ.

ತೀರಾ ಇತ್ತೀಚೆಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಸಂತೋಷ್‌ ಅವರ ಹೆಸರು ಕೇಳಿಬಂತು. ‘ಬ್ರಿಂಗ್‌ ಬ್ಯಾಕ್‌ ಸಂತೋಷ್‌' ಎಂಬ ಘೋಷವಾಕ್ಯಗಳು ರಾರಾಜಿಸತೊಡಗಿದ್ದವು.

Follow Us:
Download App:
  • android
  • ios