ಬೆಂಗಳೂರು : ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೇಲ್ವರ್ಗಗಳಲ್ಲಿರುವ ಬಡವರಿಗೂ ಮೀಸಲಾತಿ ಸೌಲಭ್ಯ ಸಿಗಬೇಕು ಎಂಬ ಮಹತ್ವಾಕಾಂಕ್ಷೆ ಯೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶೇ.10 ರಷ್ಟು ಇಡಬ್ಲ್ಯುಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗ) ಮೀಸಲಾತಿ ಪಡೆಯಲು ರಾಜ್ಯ ಸರ್ಕಾರವು ‘ಆದಾಯ ಮತ್ತು ಸ್ವತ್ತು ಪ್ರಮಾಣಪತ್ರ’ ವಿತರಣೆಗೆ ಚಾಲನೆ ನೀಡಿದೆ. 

ಆದರೆ, ಈ ಮೀಸಲಾತಿಯ ಪ್ರಯೋಜನ ಕೇಂದ್ರ ಸರ್ಕಾರದ ಸೇವೆಗಳಿಗೆ ಮಾತ್ರ ಲಭ್ಯ. ರಾಜ್ಯ ಸರ್ಕಾರದ ಸೇವೆಗಳಲ್ಲಿ ಈ ಸೌಲಭ್ಯ ಪಡೆಯಲು ಫಲಾನುಭವಿಗಳು ಇನ್ನೂ ಕಾಯಬೇಕು!

ಏಕೆಂದರೆ, ರಾಜ್ಯ ಸರ್ಕಾರ ಇನ್ನೂ ಕೇಂದ್ರದ ಸಂವಿಧಾನ ತಿದ್ದುಪಡಿ ಕಾಯಿದೆಯನ್ನು ಅಂಗೀಕರಿಸಿಲ್ಲ. ಜತೆಗೆ, ಕೇಂದ್ರ ಸರ್ಕಾರ ಇಡಬ್ಲ್ಯುಎಸ್ ಮೀಸಲಾತಿಗೆ ಅರ್ಹ ಎಂದು ಗುರುತಿಸಿರುವ 144 ಜಾತಿಗಳ ಪೈಕಿ 139 ಜಾತಿಗಳು ರಾಜ್ಯದಲ್ಲಿ ಈಗಾಗಲೇ ಒಬಿಸಿ ಮೀಸಲಾತಿ ಪಡೆಯುತ್ತಿವೆ. ಈ ಗೊಂದಲ ನಿವಾರಣೆಯಾಗದ ಹೊರತು ಕೇಂದ್ರ ಸೂಚಿಸಿರುವ ಎಲ್ಲಾ 144 ಜಾತಿಗಳಿಗೆ ರಾಜ್ಯದಲ್ಲಿ ಮೀಸಲಾತಿ ನೀಡಲು ಸಾಧ್ಯವಾಗುವುದಿಲ್ಲ.
ಈ ಗೊಂದಲ ನಿವಾರಣೆಯಾಗು ವವರೆಗೂ ಫಲಾನುಭವಿಗಳು ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರವು ಸದರಿ 144 ಜಾತಿ, ಉಪ ಜಾತಿ ಹಾಗೂ ಧರ್ಮಗಳ ಅಭ್ಯರ್ಥಿಗಳಿಗೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ‘ಆದಾಯ ಮತ್ತು ಸ್ವತ್ತು ಪ್ರಮಾಣಪತ್ರ’ ವಿತರಣೆ ಆರಂಭಿಸಿದೆ.

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ 2019 ರ ಜನವರಿಯಲ್ಲಿ ಆದೇಶಿಸಿತ್ತು ರಾಜ್ಯದಲ್ಲಿ ಇದರ ಅನುಷ್ಠಾನಕ್ಕೆ ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರವು ಕನಿಷ್ಠ ಪ್ರಮಾಣಪತ್ರ ವಿತರಣೆಗೂ ಮುಂದಾಗಿರಲಿಲ್ಲ. ಇದರಿಂದ ಕೇಂದ್ರದ ಮೀಸಲಾತಿ ಸೌಲಭ್ಯ ಪಡೆಯಲೂ ಸಹ ಅಭ್ಯರ್ಥಿಗಳಿಗೆ ಸಂಕಟ ಎದುರಾಗಿತ್ತು. ತೀವ್ರ ಒತ್ತಡದ ಬಳಿಕ ಮೇ 14 ರಂದು ಕೇಂದ್ರದ ಮೀಸಲಾತಿ ಪಟ್ಟಿಯಲ್ಲಿಲ್ಲದ 144 ಜಾತಿಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರವು ಆದಾಯ ಮತ್ತು ಸ್ವತ್ತು ಪ್ರಮಾಣಪತ್ರ ವಿತರಣೆಗೆ ಆದೇಶ ಮಾಡಿತ್ತು. 

ಈ ವರ್ಗಗಳ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪಡೆಯಲು ಆದಾಯ ಮತ್ತು ಸ್ವತ್ತು ಪ್ರಮಾಣಪತ್ರಗಳನ್ನು ‘ಅಟಲ್ ಜೀ ಜನಸ್ನೇಹಿ ಕೇಂದ್ರ’ಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಕನಿಷ್ಠ ಪಕ್ಷ ಕೇಂದ್ರ ಸರ್ಕಾರದ ಸೇವೆಗಳಲ್ಲಾದರೂ ಮೀಸಲಾತಿ ಪಡೆಯಲು ನೆರವಾಗಿದೆ. ಜತೆಗೆ ಐಐಟಿಯಂತಹ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ರಾಜ್ಯದಿಂದ ಇಡಬ್ಲ್ಯುಎಸ್ ವರ್ಗದ ಸಾವಿರಾರು ಅಭ್ಯರ್ಥಿಗಳು ಜೆಇಇ ಮುಖ್ಯ ಪರೀಕ್ಷೆ ಬರೆದು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. 

ಇವರಿಗೆ ಪ್ರಮಾಣಪತ್ರ ವಿತರಣೆಯಲ್ಲಿ ಆಗುತ್ತಿದ್ದ ವಿಳಂಬದಿಂದಾಗಿ ತೀವ್ರ ಆತಂಕ ಎದುರಾಗಿತ್ತು. ಕಳೆದ ವಾರದಿಂದ ಪ್ರಮಾಣಪತ್ರ ವಿತರಿಸುತ್ತಿರುವುದರಿಂದ ನಿಟ್ಟಿಸಿರು ಬಿಡುವಂತಾಗಿದೆ. 

ವಿಳಂಬದಿಂದ ಗೊಂದಲ: ಮೇ 14 ರಂದು ಪ್ರಮಾಣಪತ್ರ ವಿತರಣೆಗೆ ಆದೇಶಿಸಿದ್ದರೂ ಪ್ರಮಾಣಪತ್ರ ವಿತರಿಸಲು ನಾಡ ಕಚೇರಿ ನಿರ್ದೇಶನಾಲಯಕ್ಕೆ ಸಾಧ್ಯವಾಗಿರಲಿಲ್ಲ. ಜಾತಿ, ಆದಾಯ ಹಾಗೂ ಇತರೆ ಪ್ರಮಾಣಪತ್ರಗಳ ಡಿಜಿಟಲ್ ಪ್ರತಿಯನ್ನು ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುತ್ತಿದೆ. ಹೊಸದಾಗಿ ಇಡಬ್ಲ್ಯು ಎಸ್ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆಗೆ ಎನ್‌ಐಸಿ ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಿದೆ. 

ತಂತ್ರಾಂಶದಲ್ಲಿ ಲೋಪಗಳು ಇದ್ದ ಕಾರಣ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿತ್ತು. ತಾಂತ್ರಿಕ ಲೋಪಗಳಿಂದ ಆಗಿದ್ದ ವಿಳಂಬವನ್ನು ಸರಿಪಡಿಸಿದ್ದು, ಇದೀಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ನಾಡ ಕಚೇರಿ ನಿರ್ದೇಶನಾಲಯದ ಅಧಿಕಾರಿ ಗಳು ಹೇಳಿದ್ದಾರೆ. ಪ್ರಮಾಣಪತ್ರ ವಿತರಿಸಲು ರಾಜ್ಯ ಸರ್ಕಾರ ಮಾಡುತ್ತಿದ್ದ ವಿಳಂಬದಿಂದಾಗಿ ಐಐಟಿ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಗಳು ತೀವ್ರ 
ಆತಂಕಕ್ಕೆ ಗುರಿಯಾಗಿದ್ದರು. ರಾಜ್ಯದ ವಿದ್ಯಾರ್ಥಿಗಳು ಹಾಗೂ ಪೋಷಕರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ  ಮನವಿ ಮಾಡಿದ ಹಿನ್ನೆಲೆ ಯಲ್ಲಿ ಇಡಬ್ಲ್ಯುಎಸ್ ವರ್ಗದ ಅಭ್ಯರ್ಥಿಗಳು ಆದಾಯ ಪ್ರಮಾಣ ಪತ್ರ ಸಲ್ಲಿಸಲು 2019 ರ ಜೂ.5 ರವರೆಗೆ ಕಾಲಾವಕಾಶ ಕಲ್ಪಿಸಲಾಗಿತ್ತು. 

ಇದೀಗ ಮೇ 27 ರಿಂದ ಪ್ರಮಾಣಪತ್ರ ವಿತರಣೆಗೆ ಚಾಲನೆ ನೀಡಿದ್ದು, ಯಾವುದೇ ದೋಷ ಗಳಿಲ್ಲದೆ ಅರ್ಜಿ ಸಲ್ಲಿಸಿದ 3 - 4 ದಿನಗಳಲ್ಲಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರಿಂದ ವಿಳಂಬದಿಂದ ಆಗಿದ್ದ ಗೊಂದಲಗಳೂ ಬಗೆಹರಿದಿವೆ.

ರಾಜ್ಯ ಗುರುತಿಸಿದ ಜಾತಿಗಳು

ಬ್ರಾಹ್ಮಣ, ಆರ್ಯವೈಶ್ಯ, ನಾಯರ್,
ಮೊದಲಿಯಾರ್, ಜೈನರು, ಆಗಮುಡಿ, ಮುತ್ರಾಚ,
ಬಾವಂದಿ, ಬೈರಾಗಿ, ದವರಿ, ಗುಸಾಯಿ, ಹೆಳೊವ,
ನಂದಿವಾಳ, ಮೊಗೇರ, ಬಂಡೆ-ಬೆಸ್ತರ, ಕಬ್ಬೆರ,
ಖಾರ್ವಿ/ ಕೊಂಕಣ ಖಾರ್ವಿ, ಕಿಳ್ಳಿಕ್ಯಾತ, ದೇವದಾಸಿ,
ಬಸವಿ, ಬೊಗಂ, ಗಾಣಿಕ, ಕಲಾವಂತ, ಗೊಣಿಗ
ಮನೆ, ಗೂರ್ಖಾ, ಲಾಡರು, ಯೆಲೆಗಲ್,
ಮಲಯ, ಗೌರಿಗ, ಪಂಗುಯಲ್, ಪಂಗುಸಲ್,
ಜೀನಗಾರ, ತೆವರ್, ಕಲಾರಿ, ಕಲ್ಲಾರ, ಕಲ್ಲು ಕುಟಿಗ,
ಉಪ್ಪಾರ, ಪಡಿ, ಡೆರಿಯ, ಸಾರಂತ, ಗೌಳಿ, ತೆಲುಗು
ಗೌಡ (ಚಿಕ್ಕಮಗಳೂರು, ಹಾಸನ ಜಿಲ್ಲೆ) ಬಂಜಾರಿ,
ಬ್ರಿಂಜಾರಿ, ವಂಜಾರ, ವಂಜಾರಿ, ಲಾಂಬೈಡ್,
ಗೊರೆ, ರೆಮೊಷಿ, ಪರದಿಸ್, ಕಾಡುಗೊಲ್ಲ,
ಹಟ್ಟಿಗೊಲ್ಲ, ಮಡಿವಾಳ, ಸಕಜವಾಡು,ಹಾಲ
ಕ್ಷತ್ರೀಯ, ಇಳ್ಳವನ್, ತಿಯನ್/ತಿಯ್ಯ, ಕುಂಬಾರ,
ಕ್ಷೌರಿಕ, ನಾಡಿಗ, ಬೌದ್ಧರು, ಅಗ್ನಿ ವಂಶ ಕ್ಷತ್ರೀಯ,
ಅಗ್ನಿ ಕುಲ ಕ್ಷತ್ರಿಯ, ಗಜ್ಜಿಗಾರ, ತರುವನ್, ಘಾಡಸಿ,
ಬೊಗಾರ, ಕೊಳಾಯಿರಿ, ಕೊಳ್ಯಿರಿ, ಕುಟುಮ,
ಕುಲವಾಡಿ ಮರಾಠಿ, ಪೊಲೆದವ/ಪೊಲೆದವರು,
ಮಿರಲ, ಸ್ವಕುಳ ಸಾಳಿ, ಜ್ಯೋತಿಸಾಗರ, ಅನಪ್ಪನ್,
ಬಾಂಧಿ, ಬೊಳಹಳ್ಳಲ, ಬಲ್ಲಾಳ, ಭಾಟಿಯಾಲ್,
ಭಾಟ್ಟಿಯ, ಚಕ್ಕನ್, ಡೋಗ್ರಾ, ಗುಳ್ಳಿ, ಜಟ್ಟಿ/ಜೆಟ್ಟಿ,
ಮಲ್ಲರು ಮಲ್ಲ ಕ್ಷತ್ರಿಯ, ಮುಷ್ಟಿಗ, ಕಾರುಣಿಕ,
ಕೊಟ್ಟೆಯಾರ, ಕುಮಾರ ಕ್ಷತ್ರಿಯ, ಕ್ಷತ್ರಿಯ/ಕ್ಷತ್ರಿ
ಮಾಳವ, ಮಲೆಯ, ಆರ್ಯನ್, ರಾಜು ಕ್ಷತ್ರೀಯ,
ರಾಜು-ರಾಜು, ರಾಜುವಾರ್/ರಾಜವಾರ್, ತುಳು,
ತುಳುವ, ರೆಡ್ಡಿ (ಬಲಿಜ), ತುಳೇರು ಬಲಿಜ, ಅರಸು,
ಮುಸ್ಲಿಂ (ಕಚಿ ಮೆಮನ್, ನವಾಯತ್, ಬೊಹ್ರ,
ಸಯ್ಯಿದ್, ಶೇಖರ್, ಪಠಾಣ್, ಮುಘಲ್ ಇತರೆ),
ಸರ್ಪ ಒಕ್ಕಲಿಗ, ಹಳ್ಳಿಕಾರ ಒಕ್ಕಲಿಗ, ನಾಮಧಾರಿ
ಒಕ್ಕಲಿಗ, ಗಂಗಡ್ಕರ ಒಕ್ಕಲಿಗ, ದಾಸ ಒಕ್ಕಲಿಗ, ರೆಡ್ಡಿ
ಒಕ್ಕಲಿಗ, ಮರಸು ಒಕ್ಕಲಿಗ, ಕುಂಚಿಟಿಗ, ಕಾಪು,
ಹೆಗ್ಗಡೆ, ಕಮ್ಮಾ, ರೆಡ್ಡಿ, ನಾಮಧಾರಿ ಗೌಡ,
ಕೊಡಗರು, ವೀರಶೈವ ಲಿಂಗಾಯತ, ಲಿಂಗಾಯತ
ಹೆಳವ, ಲಿಂಗಾಯತ ಅಂಬಿಗ, ಲಿಂಗಾಯತ
ಭೊಯಿ, ಲಿಂಗಾಯತ ಗಂಗಾಮತ, ಲಿಂಗಾಯತ,
ಬಂಡಾರಿ, ಲಿಂಗಾಯತ ಕ್ಷೌರಿಕ, ಲಿಂಗಾಯತ
ಪಂಚಾಳ, ಲಿಂಗಾಯತ/ವೀರಶೈವ ಪಂಚಮಸಾಲಿ,
ಮರಾಠ, ಆರ್ಯ, ಆರ್ಯ ಮರಾಠ, ಬೌದ್ಧ,
ಕ್ರೆಸ್ತ, ಬಂಟ.

 

ವರದಿ : ಶ್ರೀಕಾಂತ್ ಎನ್.ಗೌಡಸಂದ್ರ