Asianet Suvarna News Asianet Suvarna News

ಪಶ್ಚಿಮ ಘಟ್ಟದಲ್ಲಿ ಕಾಮಗಾರಿ ನಿರ್ಬಂಧ?

ಪಶ್ಚಿಮ ಘಟ್ಟಶ್ರೇಣಿಯ ಪೈಕಿ 57 ಸಾವಿರ ಚದರ ಕಿ.ಮೀ.  ವ್ಯಾಪ್ತಿಯಷ್ಟು ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರ ಭರದ ತಯಾರಿ ನಡೆಸಿದೆ. ಈ ಸಂಬಂಧ ಕರಡು ಅಧಿಸೂಚನೆಯೊಂದನ್ನು ಕೇಂದ್ರ ಪರಿಸರ ಸಚಿವಾಲಯ ಸಿದ್ಧಪಡಿಸಿದೆ. 

Western Ghats Forest Ministry Bans Construction Mining In Western Ghats
Author
Bengaluru, First Published Oct 17, 2018, 8:01 AM IST
  • Facebook
  • Twitter
  • Whatsapp

ನವದೆಹಲಿ: ಅಪರೂಪದ ಜೀವವೈವಿಧ್ಯವನ್ನು ಹೊಂದಿರುವ ಪಶ್ಚಿಮ ಘಟ್ಟಶ್ರೇಣಿಯ ಪೈಕಿ 57 ಸಾವಿರ ಚದರ ಕಿ.ಮೀ.  ವ್ಯಾಪ್ತಿಯಷ್ಟು ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರ ಭರದ ತಯಾರಿ ನಡೆಸಿದೆ. ಈ ಸಂಬಂಧ ಕರಡು ಅಧಿಸೂಚನೆಯೊಂದನ್ನು ಕೇಂದ್ರ ಪರಿಸರ ಸಚಿವಾಲಯ ಸಿದ್ಧಪಡಿಸಿದೆ. ಒಂದು ವೇಳೆ, ಈ ಅಧಿಸೂಚನೆ ಜಾರಿಗೆ ಬಂದಲ್ಲಿ ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಕಲ್ಲಿನ ಕ್ವಾರಿ, ವಿದ್ಯುತ್‌ ಉತ್ಪಾದನೆಯಂತಹ ಯೋಜನೆಗಳು ಸಂಪೂರ್ಣ ನಿಷೇಧಕ್ಕೆ ಒಳಗಾಗಲಿವೆ.

ಪಶ್ಚಿಮಘಟ್ಟದಲ್ಲೇ ಬರುವ ಕೇರಳ ಶತಮಾನದಲ್ಲೇ ಕಂಡು ಕೇಳರಿಯದ ಮಳೆ ಹಾಗೂ ಭೀಕರ ಪ್ರವಾಹಕ್ಕೆ ಸಾಕ್ಷಿಯಾದ ಬೆನ್ನಿಗೇ ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತರಾಟೆಗೆ ತೆಗೆದುಕೊಂಡಿತ್ತು. ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ತೊಂದರೆ ಉಂಟು ಮಾಡುವಂತಹ ಚಟುವಟಿಕೆಗಳಿಗೆ ಪರಿಸರ ಅನುಮತಿ ನೀಡದಂತೆ ಆರು ರಾಜ್ಯಗಳಿಗೆ ನಿರ್ಬಂಧ ವಿಧಿಸಿ ಸೆ.4ರಂದು ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕರಡು ಅಧಿಸೂಚನೆಯನ್ನು ಸಿದ್ಧಪಡಿಸಿ, ಆಕ್ಷೇಪಣೆ ಸಲ್ಲಿಕೆಗೆ 60 ದಿನಗಳ ಕಾಲಾವಕಾಶವನ್ನು ನೀಡಿದೆ. ಆನಂತರ ಅಂತಿಮ ಅಧಿಸೂಚನೆಯನ್ನು ಹೊರಡಿಸಲಿದೆ.

ಆರು ರಾಜ್ಯಗಳ ವ್ಯಾಪ್ತಿಯಲ್ಲಿರುವ ಪಶ್ಚಿಮಘಟ್ಟದ ಕೆಲವೊಂದು ಭಾಗವನ್ನು ಈಗಾಗಲೇ ಯುನೆಸ್ಕೋ ವಿಶ್ವ ನೈಸರ್ಗಿಕ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ. ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡುವ ಸಂಬಂಧ ಯುಪಿಎ ಸರ್ಕಾರ 2010ರಲ್ಲಿ ಮಾಧವ ಗಾಡ್ಗೀಳ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಗಾಡ್ಗೀಳ್‌ ಸಮಿತಿ ನೀಡಿದ್ದ ವರದಿಯನ್ನು ಘಟ್ಟವ್ಯಾಪ್ತಿಯ ರಾಜ್ಯಗಳು ತೀವ್ರವಾಗಿ ವಿರೋಧಿಸಿದ್ದವು. ಈ ವರದಿಯಿಂದ ಅಭಿವೃದ್ಧಿ ಹಾಗೂ ಜನವಸತಿ ಪ್ರದೇಶಗಳಿಗೆ ತೊಂದರೆಯಾಗಲಿದೆ ಎಂದು ಪ್ರತಿಭಟನೆ ಸಲ್ಲಿಸಿದ್ದವು.

ಗಾಡ್ಗೀಳ್‌ ಸಮಿತಿ ವರದಿಯನ್ನು ಪರಾಮರ್ಶೆಗೆ ಒಳಪಡಿಸಲು 2013ರಲ್ಲಿ ಯುಪಿಎ ಸರ್ಕಾರ ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್‌ ನೇತೃತ್ವದ ಅತ್ಯುನ್ನತ ಸಮಿತಿಯೊಂದನ್ನು ರಚನೆ ಮಾಡಿತ್ತು. ಪಶ್ಚಿಮಘಟ್ಟವ್ಯಾಪ್ತಿಯ ಶೇ.37ರಷ್ಟುಪ್ರದೇಶ ಅಂದರೆ 60 ಸಾವಿರ ಹೆಕ್ಟೇರ್‌ ಅನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಕಸ್ತೂರಿ ರಂಗನ್‌ ಸಮಿತಿ ಶಿಫಾರಸು ಮಾಡಿತ್ತು. ಆದರೆ ಇದಕ್ಕೂ ರಾಜ್ಯಗಳು ವಿರೋಧ ವ್ಯಕ್ತಪಡಿಸಿದವು. ಇದೀಗ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕರಡು ಅಧಿಸೂಚನೆಯಲ್ಲಿ 57 ಸಾವಿರ ಚದರ ಕಿ.ಮೀ.ಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲು ಉದ್ದೇಶಿಸಲಾಗಿದೆ.

57 ಸಾವಿರ ಚ.ಕಿ.ಮೀ

ಕರ್ನಾಟಕ ಸೇರಿ 6 ರಾಜ್ಯಗಳ 57 ಸಾವಿರ ಚದರ ಕಿಲೋಮೀಟರು ಪಶ್ಚಿಘಟ್ಟಅರಣ್ಯ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಘೋಷಿಸುವುದಾಗಿ ಪರಿಸರ ಸಚಿವಾಲಯದ ಕರಡು ಅಧಿಸೂಚನೆಯಲ್ಲಿ ಉಲ್ಲೇಖ

ಯೋಜನೆಗೆ ನಿಷೇಧ

ಪರಿಸರ ಸೂಕ್ಷ್ಮ ಪ್ರದೇಶ ಎಂದು ಒಂದೊಮ್ಮೆ ಘೋಷಿಸಿದರೆ ಅಂತಹ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಉಷ್ಣ ವಿದ್ಯುತ್‌ ಉತ್ಪಾದನಾ ಸ್ಥಾವರ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತಿಲ್ಲ.

ಕೋರ್ಟ್‌ ತರಾಟೆ:  ಕೇಂದ್ರ ತರಾತುರಿ

ಕೇರಳ ಜಲಪ್ರಳಯದ ಬಳಿಕ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಪಶ್ಚಿಮಘಟ್ಟಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದರ ತರುವಾಯ ಕೇಂದ್ರ ಪರಿಸರ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ.

60 ದಿನ ಟೈಂ

ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಪರಿಸರ ಸೂಕ್ಷ್ಮ ಘೋಷಣೆಗೆ ಕರ್ನಾಟಕ, ಕೇರಳ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈಗ ಸರ್ಕಾರಗಳ ನಿಲುವು ಏನು ಎಂಬುದು ಕುತೂಹಲ ಮೂಡಿಸಿದೆ.

Follow Us:
Download App:
  • android
  • ios