ಬೆಂಗಳೂರು :   ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು ಇದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಕರಾವಳಿ ತೀರದ ಜಿಲ್ಲೆಗಳಲ್ಲಿ ಭಾರೀ ಗಾಳಿ- ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ರಾಜ್ಯದ ಕರಾವಳಿ ತೀರದಲ್ಲಿ ಜೂನ್ 11 ವರೆಗೆ ಕಟ್ಟೆಚ್ಚರ ವಹಿಸುವಂತೆ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. 

ಬಲವಾದ ಗಾಳಿ, ಸಮುದ್ರದ ಅಲೆ ಗಳ ಅಬ್ಬರ ಹಾಗೂ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ಅಗತ್ಯ ಮುಂಜಾಗ್ರತೆ ವಹಿಸುವಂತೆ ತಿಳಿಸಲಾಗಿದೆ.  ವಿಶೇಷವಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. 

ಸಮುದ್ರದ ಅಲೆಗಳ ಮಟ್ಟ 3.5ರಿಂದ 4.5 ಮೀಟರ್ ಎತ್ತರವಿರಲಿದ್ದು, 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 

ಗುಡುಗು ಸಹಿತ ಮಳೆ: ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಒಳನಾಡು ಜಿಲ್ಲೆಗಳಾದ, ಗದಗ, ಬೆಳಗಾವಿ, ಧಾರಾವಾಡ, ಹಾವೇರಿ, ಚಿಕ್ಕಮ ಗಳೂರು, ಹಾಸನ, ಕೊಡಗು, ಶಿವಮೊಗ್ಗ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕೇರಳದಲ್ಲಿ ಆರೆಂಜ್ ಆಲರ್ಟ್: ಮುಂಗಾರು ಪ್ರಭಾವದಿಂದಾಗಿ ಕೇರಳದ ತಿರುವನಂತಪುರ, ಆಲಪ್ಪುಳ, ಕೋಳಿಕ್ಕೋಡ್ ಸೇರಿದಂತೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಇದೇ ವೇಳೆ ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಭಾನುವಾರ ನಸುಕಿನ ಜಾವ 3 ರ ವೇಳೆಗೆ ಕಡಿಮೆ ವಾಯು ಒತ್ತಡ ಸ್ಥಿತಿ ನಿರ್ಮಾಣವಾಗಿದೆ. 2 ದಿನದಲ್ಲಿ ಇದು ವಾಯುಭಾರ ಕುಸಿತವಾಗಿ ಪರಿವರ್ತನೆಯಾಗಲಿದ್ದು, ಜೂ. 12 ರ ವೇಳೆ ಚಂಡಮಾರುತವಾಗಿ ರೂಪಾಂತರಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೇರಳ ಕರಾವಳಿಯಲ್ಲಿ ‘ಆರೆಂಜ್ ಅಲರ್ಟ್’ (ಭಾರಿ ಮಳೆ ಸೂಚನೆ) ಘೋಷಣೆ ಮಾಡಲಾಗಿದೆ.

ವಾಯುಭಾರ ಕುಸಿತ ಹಾಗೂ ಚಂಡಮಾರುತದ ಪ್ರಭಾವದಿಂದಾಗಿ ಕೇರಳದ ಕೆಲವೊಂದು ಭಾಗ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ನಿತ್ಯ 6 ರಿಂದ 12 ಸೆಂ.ಮೀ.ವರೆಗೂ ಮಳೆಯಾಗಲಿದೆ. ಕರ್ನಾಟಕದ ಕರಾವಳಿಯ ಕೆಲವು ಪ್ರದೇಶಗಳಲ್ಲಿ 20 ಸೆಂ.ಮೀ.ವರೆಗೂ ಮಳೆಯಾಗಲಿದೆ. ಕರ್ನಾಟಕ, ಕೇರಳ, ಲಕ್ಷದ್ವೀಪ, ದಕ್ಷಿಣ ಮಹಾರಾಷ್ಟ್ರ ಕರಾವಳಿ ಯಲ್ಲಿ ಗಾಳಿಯ ವೇಗ ಹೆಚ್ಚಿರಲಿದೆ. ಕಡಿಮೆ ವಾಯು ಒತ್ತಡ ಪರಿಸ್ಥಿತಿ ಮೇಲೆ ನಿಗಾ ಇಡಲಾಗಿದೆ. ಜೂ.11 ರಿಂದ ಅರಬ್ಬೀ ಸಮುದ್ರದಲ್ಲಿ ಅಬ್ಬರ ಹೆಚ್ಚಾಗಲಿದೆ. 

ಗುಜರಾತ್, ಮಹಾರಾಷ್ಟ್ರ ಕರಾವಳಿಯಲ್ಲಿ ಜೂ.12 ಹಾಗೂ 13 ರಂದು ಅಲೆಗಳ ಅಬ್ಬರ ಅಧಿಕಗೊಳ್ಳಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯ ಬಾರದು ಎಂದು ಸೂಚನೆ ಕೊಟ್ಟಿದ್ದಾರೆ.