ಬೆಂಗಳೂರು [ಆ.03]: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಹೊರಬಂದು ಅನರ್ಹಗೊಂಡಿರುವ ಒಟ್ಟು 17 ಶಾಸಕರ ನಡೆ ತೀವ್ರ ಕುತೂಹಲ ಮೂಡಿಸಿದ್ದು, ಇವರೆಲ್ಲ ಭವಿಷ್ಯ ಸುಪ್ರೀಂಕೋರ್ಟ್ ಮೇಲೆ ನಿಂತಿದೆ. ಇದರ ನಡುವೆ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಅವರು ಅನರ್ಹ ಶಾಸಕರ ಬೆಂಬಲಕ್ಕೆ ನಾವಿದ್ದೇವೆ‌ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

ಇಂದು [ಶನಿವಾರ] ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ಅನರ್ಹ ಶಾಸಕರ ಬೆಂಬಲಕ್ಕೆ ನಾವಿದ್ದೇವೆ‌. ಅವರು ನಮಗೆ ಸಹಕಾರ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ರಾಜಕೀಯ ನಡೆ ಬಗ್ಗೆ ಇಂದು ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಎಸ್.ಟಿ ಸೋಮಶೇಖರ್, ಗೋಪಾಲಯ್ಯ, ಎಂ.ಟಿ.ಬಿ ನಾಗರಾಜ್ ಜತೆ ಸೇರಿ ಚರ್ಚೆ ಮಾಡಿದ್ದು, ನ್ಯಾಯಾಲಯದಲ್ಲಿ ಯಾವ ತೀರ್ಪು ಬರಲಿದೆ ಅನ್ನೋದನ್ನ ಕಾದು ನೋಡುತ್ತಿದ್ದೇವೆ ಎಂದು ಕಡ್ಡಿಮುರಿದಂತೆ ಹೇಳಿದರು.

ಈ ಮೊದಲು ಬಿಜೆಪಿ ಒಳಗೊಳಗೆ ಸಂಚು ರೂಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ಇದನ್ನು ಬಿಜೆಪಿ ನಾಯಕರ ಒಪ್ಪಿಕೊಳ್ಳಲು ತಯಾರು ಇರಲಿಲ್ಲ. ಇದೀಗ ಬಿಜೆಪಿ ನಾಯಕನ ಹೇಳಿಕೆಯಿಂದ ಬಿಜೆಪಿ ಆಪರೇಷನ್ ಲೋಟಸ್ ಬಯಲಾಗಿದೆ.