ನವದೆಹಲಿ :  ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕಿಳಿಸುವ ಕನಸು ಕಾಣುವ ಮುನ್ನ ವಿಪಕ್ಷಗಳ ಒಕ್ಕೂಟವು ತಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ ಎಂದು ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿಯಲ್ಲಿ ವಿಪಕ್ಷ ಒಕ್ಕೂಟಗಳ ಬೃಹತ್ ಸಭೆಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಟಾಂಗ್ ನೀಡಿದ್ದಾರೆ. 

ನರೇಂದ್ರ ಮೋದಿ ಸರ್ಕಾರವನ್ನು ಕೆಳಕ್ಕೆ ಇಳಿಸುವ ಯೋಚನೆ ಮಾಡುವ ಮುನ್ನ ಅವರ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದನ್ನು ಮೊದಲು ಘೋಷಣೆ ಮಾಡಲಿ.  2019ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ವಿಪಕ್ಷಗಳು ಮೈತ್ರಿ ಕೂಟ ರಚನೆ ಮಾಡಿಕೊಳ್ಳುತ್ತಿವೆ.  ಚುನಾವಣೆಯ ಬಗ್ಗೆ ರಣತಂತ್ರ ರೂಪಿಸಲು  ಸಭೆಯನ್ನು ಕರೆಯಲಾಗಿದೆ. 

ವಿಪಕ್ಷಗಳು ಒಂದಾಗುತ್ತಿರುವುದು  ಒಳ್ಳೆ ವಿಚಾರವೇ ಆಗಿದೆ. ನಮ್ಮ ವಿರುದ್ಧ ವಿಪಕ್ಷಗಳು ಒಂದಾಗುತ್ತಿವೆ. ಆದರೆ ಇದಕ್ಕೂ ಮೊದಲು ತಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದನ್ನು ಮೊದಲು ನಿರ್ಧಾರ ಮಾಡಲಿ. ನಂತರ ನರೇಂದ್ರ ಮೋದಿ ಸರ್ಕಾರವನ್ನು ಕೆಳಕ್ಕಿಳಿಸುವ ಯೋಚನೆ ಮಾಡಲಿ ಎಂದಿದ್ದಾರೆ. 

ನಮ್ಮ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರಿದ್ದಾರೆ, ನಿಮ್ಮ ಯುಪಿಎ ಒಕ್ಕೂಟದಲ್ಲಿ ಸೂಕ್ತ ಅಭ್ಯರ್ಥಿ ಯಾರಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. 

ನವದೆಹಲಿಯಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉಸ್ತುವಾರಿಯಲ್ಲಿ ಬೃಹತ್ ವಿಪಕ್ಷ ಒಕ್ಕೂಟಗಳ ಸಭೆ ನಡೆಸಲಾಗುತ್ತಿದೆ.  ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐ ನಾಯಕ ಸುಧಾಕರ್‌ ರೆಡ್ಡಿ, ಡಿಎಂಕೆ ಅಧ್ಯಕ್ಷ ಸ್ಟಾಲಿನ್‌, ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ಆರ್‌ಜೆಡಿಯ ತೇಜಸ್ವಿ ಯಾದವ್‌, ಎಲ್‌ಜೆಡಿಯ ಶರದ್‌ ಯಾಧವ್‌, ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರುಖ್‌ ಅಬ್ದುಲ್ಲಾ, ಎನ್‌ಸಿಪಿಯ ಶರದ್‌ ಪವಾರ್‌, ಎಸ್‌ಪಿಯ ಅಖಿಲೇಶ್‌ಸಿಂಗ್‌, ಬಿಎಸ್‌ಪಿಯ ಸತೀಶ್‌ಚಂದ್ರ ಹಾಗೂ ಇತರೆ ಸಣ್ಣಪುಟ್ಟಪಕ್ಷಗಳ ನಾಯಕರು ಭಾಗಿಯಾಗುತ್ತಿದ್ದಾರೆ.