‘ಪಾಕಿಸ್ತಾನದ ಕ್ರೂರ ಕೃತ್ಯಕ್ಕೆ ತಿರುಗೇಟು ನೀಡುತ್ತೀರಾ’ ಎಂದು ಸುದ್ದಿಗಾರರಿಂದ ತೂರಿಬಂದ ಪ್ರಶ್ನೆಗಳ ಪ್ರವಾಹಕ್ಕೆ ಜನರಲ್ ರಾವತ್ ಅವರು ನೇರ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ನೆರೆ ದೇಶ ನಡೆಸುವ ಇಂತಹ ಕೆಲಸಕ್ಕೆ ಸಶ್ತ್ರ ಪಡೆಗಳು ಪ್ರಬಲ ಪ್ರತಿಕ್ರಿಯೆ ನೀಡುತ್ತವೆ ಎಂದು ಹೇಳಿದರು.

ಶ್ರೀನಗರ(ಮೇ.04): ವಸತಿ ಪ್ರದೇಶಗಳಲ್ಲಿ ಅಡಗಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿರುವ ಭಯೋತ್ಪಾದಕರನ್ನು ಹೊರಗೆಳೆದು ಮಟ್ಟ ಹಾಕಲು ದಶಕದಲ್ಲೇ ಅತಿ ಬೃಹತ್ ಪ್ರಮಾಣದ್ದು ಎನ್ನಲಾದ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಲ್ಲಿ ಗುರುವಾರ ಮುಂಜಾನೆಯಿಂದ ಆರಂಭಿಸಿವೆ. 1990ರವರೆಗೂ ನಡೆಸಲಾಗಿದ್ದಂತೆ ಪ್ರತಿ ಮನೆ-ಮನೆಗೂ ತೆರಳಿ ಉಗ್ರರ ಶೋಧ ನಡೆಸಲಾಗುತ್ತಿದೆ.

ಭಾರತದ ಗಡಿಯೊಳಕ್ಕೆ ನುಗ್ಗಿ ಇಬ್ಬರು ಯೋಧರ ಶಿರಚ್ಛೇದ ಮಾಡಿದ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬ ಕೂಗು ದೇಶಾದ್ಯಂತ ಎದ್ದಿರುವಾಗಲೇ, ಅಂತಹದ್ದೊಂದು ಕ್ರಮಕ್ಕೆ ಮುಂದಾಗುವ ಸ್ಪಷ್ಟ ಸುಳಿವನ್ನು ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೇ ಬಿಟ್ಟುಕೊಟ್ಟಿದ್ದಾರೆ. ಆದರೆ ‘ಯಾವುದೇ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮುನ್ನವೇ ಅದನ್ನು ಸೇನೆ ಬಹಿರಂಗಪಡಿಸುವುದಿಲ್ಲ’ ಎಂದು ರಾವತ್ ಹೇಳಿರುವುದು ನಾನಾ ವಿಶ್ಲೇಷಣೆಗಳಿಗೆ ಕಾರಣವಾಗಿದೆ.

ಹೀಗಾಗಿ ಈ ಪ್ರತೀಕಾರದ ದಾಳಿ ಕೆಲ ತಿಂಗಳ ಹಿಂದೆ ನಡೆಸಿದ್ದ ಸರ್ಜಿಕಲ್ ದಾಳಿಯ ರೂಪದಲ್ಲಿರುತ್ತದೆಯೋ? ಅಥವಾ ಇದಕ್ಕಿಂತ ಸ್ವಲ್ಪ ಹೆಚ್ಚು ತೀವ್ರ ಸ್ವರೂಪ ಹೊಂದಿರುತ್ತದೆಯೋ? ಅಥವಾ ಪಾಕಿಸ್ತಾನಕ್ಕೆ ಎಂದೂ ಮರೆಯದ ರೀತಿಯಲ್ಲಿ ಪಾಠ ಕಲಿಸಲು ದೀರ್ಘಕಾಲೀನ ಯುದ್ಧವೊಂದಕ್ಕೆ ಸೇನೆ ರಹಸ್ಯವಾಗಿ ಸಜ್ಜಾಗುತ್ತಿದೆಯೋ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.

‘ಪಾಕಿಸ್ತಾನದ ಕ್ರೂರ ಕೃತ್ಯಕ್ಕೆ ತಿರುಗೇಟು ನೀಡುತ್ತೀರಾ’ ಎಂದು ಸುದ್ದಿಗಾರರಿಂದ ತೂರಿಬಂದ ಪ್ರಶ್ನೆಗಳ ಪ್ರವಾಹಕ್ಕೆ ಜನರಲ್ ರಾವತ್ ಅವರು ನೇರ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ನೆರೆ ದೇಶ ನಡೆಸುವ ಇಂತಹ ಕೆಲಸಕ್ಕೆ ಸಶ್ತ್ರ ಪಡೆಗಳು ಪ್ರಬಲ ಪ್ರತಿಕ್ರಿಯೆ ನೀಡುತ್ತವೆ ಎಂದು ಹೇಳಿದರು.

‘ಭವಿಷ್ಯದ ಯೋಜನೆಗಳ ಬಗ್ಗೆ ನಾವು ಮಾತನಾಡುವುದಿಲ್ಲ. ಯೋಜನೆ ಕಾರ್ಯರೂಪಕ್ಕೆ ಬಂದ ನಂತರವಷ್ಟೇ ಅದನ್ನು ಹಂಚಿಕೊಳ್ಳುತ್ತೇವೆ. ಇಂತಹ ಕೃತ್ಯಗಳು ನಡೆದಾಗ ನಾವು ಪ್ರತೀಕಾರದ ಕ್ರಮ ಕೈಗೊಳ್ಳುತ್ತೇವೆ’ ಎಂದು ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಅವರು ತಿಳಿಸಿದರು. ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಬಳಿಕವಷ್ಟೇ ಸೇನೆ ಮಾಹಿತಿ ನೀಡಿತ್ತು. ಹೀಗಾಗಿ ರಾವತ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಮೂಲಗಳ ಪ್ರಕಾರ, ನಾಯ್ಬ್ ಸುಬೇದಾರ್ ಹಾಗೂ ಬಿಎಸ್‌ಎಫ್ ಮುಖ್ಯ ಪೇದೆಯೊಬ್ಬರ ಶಿರಚ್ಛೇದ ಮಾಡಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ವಿವಿಧ ಆಯ್ಕೆಗಳನ್ನು ಭಾರತೀಯ ಸೇನೆ ಪರಿಶೀಲಿಸುತ್ತಿದೆ ಎನ್ನಲಾಗಿದೆ.

ಪಾಕಿಸ್ತಾನದ ಕ್ರೂರ ಕೃತ್ಯಕ್ಕೆ ಭಾರತ ತನಗಿಷ್ಟ ಬಂದ ಸಮಯ ಹಾಗೂ ಜಾಗದಲ್ಲಿ ತಿರುಗೇಟು ನೀಡಲಿದೆ ಎಂದು ಸೇನಾ ಉಪಮುಖ್ಯಸ್ಥ ಶರತ್ ಚಂದ್ ಮಂಗಳವಾರವಷ್ಟೇ ತಿಳಿಸಿದ್ದರು. ಇಬ್ಬರು ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ. ಈ ಅಮಾನವೀಯ ಕೃತ್ಯಕ್ಕೆ ಸಶಸ ಪಡೆಗಳು ಸೂಕ್ತ ಉತ್ತರ ನೀಡಲಿವೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಕೂಡ ತಿಳಿಸಿದ್ದರು.