ನೀರಿನ ದರ 100 ಪಟ್ಟು ಏರಿಕೆ : ರಾಜ್ಯ ಸರ್ಕಾರದಿಂದ ಆದೇಶ

First Published 27, Jul 2018, 7:59 AM IST
Water tariff for industries up 100 fold
Highlights

ರಾಜ್ಯ ಸರ್ಕಾರ ಇದೀಗ ನೀರಿನ ದರವನ್ನು ಭರ್ಜರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಒಟ್ಟು 100 ಪಟ್ಟು ಹೆಚ್ಚು ಮಾಡಲಾಗಿದೆ. 

ಬೆಂಗಳೂರು :  ರಾಜ್ಯದಲ್ಲಿ ಕೈಗಾರಿಕೆ ಉದ್ದೇಶಕ್ಕೆ ಪೂರೈಕೆ ಮಾಡುತ್ತಿರುವ ನೀರಿನ ದರವನ್ನು ಬರೋಬ್ಬರಿ 100 ಪಟ್ಟು ಹೆಚ್ಚಳ ಮಾಡಿ ಜಲಸಂಪನ್ಮೂಲ ಇಲಾಖೆ ಆದೇಶಿಸಿದೆ. ಪ್ರತಿ ಎಂಸಿಎಫ್‌ಟಿಗೆ ಕೇವಲ 3,200 ರು. ಇದ್ದ ದರವನ್ನು ಏಕಾಏಕಿ 3 ಲಕ್ಷ ರು.ಗಳಿಗೆ ಹೆಚ್ಚಳ ಮಾಡಿದೆ. ಜಲಸಂಪನ್ಮೂಲ ಇಲಾಖೆಯು ಅಣೆಕಟ್ಟು ಮತ್ತು ಜಲಾಶಯಗಳಿಂದ ಪಡೆಯುವ ನೀರಿಗೆ ಈವರೆಗೂ ಪ್ರತಿ ಮಿಲಿಯನ್ ಕ್ಯೂಬಿಕ್ ಫೀಟ್‌ಗೆ (ಎಂಸಿಎಫ್‌ಟಿ) 3,200 ರು. ಮಾತ್ರ ವಿಧಿಸುತ್ತಿತ್ತು. 

ಮೇ 28ರಂದು ಇದರ ದರವನ್ನು ಪ್ರತಿ ಎಂಸಿಎಫ್‌ಟಿಗೆ 3 ಲಕ್ಷ ರು. ಗೆ ಹಾಗೂ ಪ್ರಾಕೃತಿಕ ಮೂಲಗಳಿಂದ ಕೆರೆ, ಕಾಲುವೆ, ಹಳ್ಳಗಳಿಂದ ಪಡೆಯುವ ನೀರಿಗೆ ಪ್ರತಿ ಎಂಸಿಎಫ್‌ಟಿಗೆ 1,800 ರು. ಇದ್ದ ದರವನ್ನು 1.50 ಲಕ್ಷ ರು.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಪ್ರತಿ ಎಂಸಿಎಫ್‌ಟಿಗೆ ಸುಮಾರು 28.3 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತದೆ. ಈ ಆದೇಶದ ಅನ್ವಯ ಕೃಷ್ಣಾ ಭಾಗ್ಯ ಜಲ ನಿಗಮವು ಇತ್ತೀಚೆಗೆ, ಪರಿಷ್ಕೃತ ದರಗಳಂತೆ ಕೈಗಾರಿಕೆಗಳಿಗೆ ಶುಲ್ಕ ವಿಧಿಸಿ ಆದೇಶ ಹೊರಡಿಸಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ಕೈಗಾರಿಕಾ ಉದ್ಯಮಿಗಳು ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದ ಕೈಗಾರಿಕಾ ಆದಾಯಕ್ಕೆ ಭಾರಿ ಹೊಡೆತ ಬೀಳಲಿದೆ. ಜತೆಗೆ ಉತ್ಪನ್ನಗಳ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಕೈಗಾರಿಕಾ ಸ್ನೇಹಿ ರಾಜ್ಯದಲ್ಲಿ ಇದರಿಂದ ಕೈಗಾರಿಕಾಭಿವೃದ್ಧಿಗೆ  ಕುಂದುಂಟಾ ಗಲಿದೆ ಎಂದು ಕೆಐಎಸ್‌ಎಂಎ ಕಾರ್ಯದರ್ಶಿ ರಮಣ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. 

ದರ ಹೆಚ್ಚಳ ಅನಿವಾರ್ಯ: ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಆದೇಶವನ್ನು ಸಮರ್ಥಿಸಿಕೊಂಡಿದ್ದು ಗುಜರಾತ್ 5 ಲಕ್ಷ ರು., ಕೇರಳ 7 ಲಕ್ಷ ರು., ಮಹಾರಾಷ್ಟ್ರ 4 ಲಕ್ಷ ರು. ಶುಲ್ಕ ವಿಧಿಸುತ್ತಿವೆ. ಅಲ್ಲದೆ, ರಾಜ್ಯದಲ್ಲಿಯೇ ಗ್ರಾಮೀಣ ಭಾಗದ ಜನರಿಗೆ ಕುಡಿಯಲು ನೀಡುತ್ತಿರುವ ನೀರಿಗೆ ಪ್ರತಿ ಸಾವಿರ ಲೀಟರ್‌ಗೆ 6 ರು. ಶುಲ್ಕ ವಿಧಿಸಲಾಗುತ್ತಿದೆ. ಆದರೆ, ಕೈಗಾರಿಕೆಗಳಿಗೆ 28.3 ದಶಲಕ್ಷ ಲೀಟರ್‌ಗೆ ಕೇವಲ 3,200 ರು. ವಿಧಿಸುವುದು  ಅವೈಜ್ಞಾನಿಕ. ಗ್ರಾಮೀಣ ಭಾಗದ ಜನರಿಗೆ ನೀಡುವುದಕ್ಕಿಂತ ಕಡಿಮೆ ದರಕ್ಕೆ ಕೈಗಾರಿಕೆಗಳಿಗೆ ನೀಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.

loader