Asianet Suvarna News Asianet Suvarna News

ಕೆಆರ್‌ಎಸ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ನೀರು : ರೈತರಿಗಿಲ್ಲ! -

ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸಿ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ರೈತರು ಬೆಳೆಗಳಿಗೆ ನೀರು ಕೇಳಲು ಭಿಕ್ಷೆ ಬೇಡುವಂತಹ ದುಸ್ಥಿತಿಗೆ ದೂಡಲ್ಪಟ್ಟಿದ್ದಾರೆ.

Water level increases KRS Dam

ಕೆ.ಎನ್‌.ರವಿ

ಮಂಡ್ಯ :  ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸಿ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ರೈತರು ಬೆಳೆಗಳಿಗೆ ನೀರು ಕೇಳಲು ಭಿಕ್ಷೆ ಬೇಡುವಂತಹ ದುಸ್ಥಿತಿಗೆ ದೂಡಲ್ಪಟ್ಟಿದ್ದಾರೆ.

ಹಿಂದೆಲ್ಲಾ ಬೆಳೆಗಳಿಗೆ ನೀರು ಬೇಕು ಎಂದರೆ ರೈತರು ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮೊರೆ ಹೋಗುತ್ತಿದ್ದರು. ಮುಖ್ಯಮಂತ್ರಿ ಅಥವಾ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರುತ್ತಿದ್ದ ಕಾವೇರಿ ನೀರಾವರಿ ಸಲಹಾ ಸಮಿತಿ, ರೈತರ ಬೇಡಿಕೆ ಮನ್ನಿಸಿ ತಕ್ಷಣವೇ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳುತ್ತಿತ್ತು. ಸಭೆ ಸೇರುವುದು ತಡವಾದ ಪಕ್ಷದಲ್ಲಿ ಬೀದಿಗಿಳಿದು ಹೋರಾಡಿ, ರೈತರು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದರು. ಮಂಡಳಿ ರಚನೆಯಿಂದಾಗಿ ಇನ್ನು ಇದಕ್ಕೆಲ್ಲಾ ಬ್ರೇಕ್‌ ಬಿದ್ದಿದೆ. ನೀರಾವರಿ ಸಲಹಾ ಸಮಿತಿಯೇ ಅಧಿಕಾರ ಕಳೆದುಕೊಂಡಿದೆ.

ಇದರ ಪರಿಣಾಮವಾಗಿ ಬೆಳೆಗಳು ಒಣಗುತ್ತಿವೆ, ನೀರು ಬೇಕು ಎಂದು ರೈತರು ಸ್ಥಳೀಯ ಜನಪ್ರತಿನಿಧಿಗಳಿಗೆ ಒತ್ತಡ ಹೇರಿದರೆ, ಪ್ರತಿಭಟಿಸಿದರೆ ಪ್ರಯೋಜನವಿಲ್ಲ. ಬದಲಾಗಿ ರೈತರ ಬೆಳೆಗಳಿಗೆ ಎಷ್ಟುನೀರು ಬೇಕು, ಯಾವ ಕಾರಣಕ್ಕೆ ಬೇಕು ಎಂಬ ಅಂಕಿ-ಅಂಶ ಸಹಿತ ವರದಿಯನ್ನು ಜಿಲ್ಲಾಡಳಿತವೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಮಂಡಳಿಗೆ ಪತ್ರ ಬರೆಯಬೇಕು. ಮಂಡಳಿಯ ಸದಸ್ಯರು ಸಭೆ ಸೇರಿ ಬೆಳೆ ಪ್ರಮಾಣ, ನೀರಿನ ಲಭ್ಯತೆ ಮತ್ತಿತರೆ ವಿವರ ಪಡೆದುಕೊಂಡು ಪರಾಮರ್ಶೆ ನಡೆಸಿ ಎಷ್ಟುನೀರು ಬಿಡಬೇಕು ಎಂಬ ಸೂಚನೆಯನ್ನು ನೀಡುತ್ತದೆ.

ಸದ್ಯ ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬು ನೀರಿಲ್ಲದೇ ಒಣಗುತ್ತಿದೆ. ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜಸಾಗರದಲ್ಲಿ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 103 ಅಡಿಯಷ್ಟುನೀರು ಇದೆ. ಆದರೆ ನಿರ್ವಹಣಾ ಮಂಡಳಿಯ ಸೂಚನೆ ಇಲ್ಲದೆ ಅಧಿಕಾರಿಗಳು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಡ್ಯಾಂನಲ್ಲಿ ನೀರಿದ್ದರೂ ರೈತರಿಗೆ ಸಿಗುತ್ತಿಲ್ಲ. ಗಾಯದ ಮೇಲೆ ಬರೆ ಎಳೆದಂತೆ, ಈವರೆಗೂ ನಿರ್ವಹಣಾ ಮಂಡಳಿಯ ಸದಸ್ಯರ ಪೂರ್ಣ ನೇಮಕವೂ ಆಗಿಲ್ಲ.

ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ:  ಕಳೆದ ವಾರವೇ ಜಿಲ್ಲಾಧಿಕಾರಿ ಎನ್‌. ಮಂಜುಶ್ರೀ ಅವರು ಜಿಲ್ಲೆಯ ಕೃಷಿ ಚಟುವಟಿಕೆ, ಕಬ್ಬಿನ ಸ್ಥಿತಿಗತಿ, ನೀರಿನ ಅಗತ್ಯತೆಗಳನ್ನು ಒಳಗೊಂಡ ಸಮಗ್ರ ಮನವಿ ಪತ್ರವೊಂದನ್ನು ಬರೆದು, ಕೆಆರ್‌ಎಸ್‌ನಿಂದ ಎಲ್ಲಾ ನಾಲೆಗಳಿಗೆ ನೀರು ಹರಿಸಲು ಕಾವೇರಿ ನೀರಿ ನಿರ್ವಹಣಾ ಮಂಡಳಿಯಿಂದ ಅನುಮತಿ ಕೊಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ಪತ್ರವನ್ನು ಆಧಾರವಾಗಿ ಇಟ್ಟುಕೊಂಡು ಮಂಡಳಿಗೆ ಮನವಿ ಪತ್ರ ಕಳುಹಿಸಬೇಕು. ನಂತರ ಮಂಡಳಿಯ ಸದಸ್ಯರು ಸಭೆ ಸೇರಿ ಮಂಡ್ಯ, ಮೈಸೂರು ಜಿಲ್ಲೆಯ ಬೆಳೆ ಪ್ರಮಾಣ, ನೀರಿನ ಲಭ್ಯತೆ ಇತ್ಯಾದಿಗಳ ಬಗ್ಗೆ ಪರಿಶೀಲಿಸಿ ನೀರು ಬಿಡುಗಡೆ ಬಗ್ಗೆ ನಿರ್ದೇಶನ ನೀಡಲಿದೆ. ಕೃಷ್ಣರಾಜಸಾಗರ ಹಾಗೂ ವಿಶ್ವೇಶ್ವರಯ್ಯ ನಾಲೆ ನಿರ್ಮಾಣವಾದ 80 ವರ್ಷಗಳಲ್ಲಿ ಇಂತಹ ವ್ಯವಸ್ಥೆ ಇದೇ ಮೊದಲು.

ನೀರಿಲ್ಲದೇ ಒಣಗುತ್ತಿದೆ ಬೆಳೆ:  ಮಂಡ್ಯ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಮಳೆ ಪ್ರಮಾಣ ತೀರಾ ಕಡಮೆಯಾಗಿದೆ. ಕೆಆರ್‌ಎಸ್‌ಗೆ ಸಾಕಷ್ಟುಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಜಿಲ್ಲೆಯಲ್ಲಿ 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬಿಗೆ ಕೂಡಲೇ ನೀರು ಬೇಕು. ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಮದ್ದೂರಿನ ಕೆಲವು ಭಾಗದಲ್ಲಿನ ಕಬ್ಬು ನೀರಿಲ್ಲದೇ ಒಣಗಿ ಹೋಗುವ ಸ್ಥಿತಿಗೆ ಬಂದಿದೆ. ಅಣೆಕಟ್ಟೆಯಲ್ಲಿ ಈ ಬಾರಿ ಸಾಕಷ್ಟುನೀರಿದ್ದರೂ ನಾಲೆಗಳಿಗೆ ನೀರು ಬಿಡುವ ಅಧಿಕಾರದಿಂದ ನಮ್ಮ ರಾಜ್ಯ ವಂಚಿತವಾಗಿದೆ.

63 ಸಾವಿರ ಹೆಕ್ಟರ್‌ ನಲ್ಲಿ ಭತ್ತ: ಮುಂಗಾರು ಹಂಗಾಮಿನಲ್ಲಿ ಭತ್ತ ನಾಟಿ ಮಾಡಿಕೊಳ್ಳಲು ರೈತರು ಸಿದ್ಧತೆ ಮಾಡುತ್ತಿದ್ದಾರೆ. ಈ ವರ್ಷ ಅಂದಾಜು 63 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡುವ ಲೆಕ್ಕಾಚಾರಗಳು ನಡೆದಿವೆ. ರೈತರಿಗೆ ಬಿತ್ತನೆ ಬೀಜ ಕೊಡಬೇಕು. ಕೇವಲ ಬಿತ್ತನೆ ಮಾತ್ರ ಕೊಟ್ಟರೆ ಸಾಲದು, ನೀರು ಸಹ ಕೊಡಬೇಕು. ಆದರೆ ನೀರು ಕೊಡುವ ಸ್ವಾತಂತ್ರ್ಯ ಈಗ ಪರರ ಪಾಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಾವು ಏನು ಮಾಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಕೃಷಿ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ರೈತರು ಕೇಳಿದರೆ ನೀರು ಬಿಡುವಂತಿಲ್ಲ

ರೈತರು ಕೇಳಿದ ಕೂಡಲೇ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುವ ಹಾಗಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ನಾವು 10 ದಿನ ಮೊದಲೇ ನೀರಿನ ಅಗತ್ಯತೆ ಕುರಿತಂತೆ ಅರ್ಜಿ ಸಲ್ಲಿಸಬೇಕು. ಮಂಡಳಿ ಅನುಮೋದಿಸಿದ ಬಳಿಕ ನೀರು ಹರಿಸಬಹುದು. ನಾವು ಕಳೆದ ವಾರವೇ ಜಿಲ್ಲೆಯಲ್ಲಿ ಬೆಳೆದು ನಿಂತಿರುವ 22 ಸಾವಿರ ಹೆಕ್ಟೇರ್‌ ಕಬ್ಬಿಗೆ ನೀರು ಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸರ್ಕಾರವೂ ಮಂಡಳಿಯ ಮುಂದೆ ಅರ್ಜಿ ಸಲ್ಲಿಸಲಿದೆ.

ಎನ್‌. ಮಂಜುಶ್ರೀ, ಮಂಡ್ಯಜಿಲ್ಲಾಧಿಕಾರಿ

ಮಂಡಳಿ ರೈತರಿಗೆ ಉರುಳು

ಅಣೆಕಟ್ಟೆಯಲ್ಲಿ ಸಾಕಷ್ಟುನೀರಿದೆ. ಕಬ್ಬು ಒಣಗುತ್ತಿದೆ. ಬೆಳೆಗಳ ವೈಫಲ್ಯ, ಸಾಲ ಬಾಧೆಯಿಂದಾಗಿ ರೈತರು ಆತ್ಮಹತ್ಯೆಯ ದಾರಿ ಹಿಡಿದ್ದಾರೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಜೆಡಿಎಸ್‌ ಪಕ್ಷ ಮಂಡ್ಯ ರೈತರ ಒಣಗಿ ಹೋಗುತ್ತಿರುವ ಕಬ್ಬಿನ ಬೆಳೆಯನ್ನು ರಕ್ಷಣೆ ಮಾಡಲು ಕೂಡಲೇ ನಾಲೆಗಳಿಗೆ ನೀರು ಬಿಡಬೇಕು. ಕೇಂದ್ರ ಸರ್ಕಾರ ರಚನೆ ಮಾಡಿರುವ ನಿರ್ವಹಣಾ ಮಂಡಳಿಯೇ ರೈತರ ಪಾಲಿಗೆ ಉರುಳಾಗಲಿದೆ.

ಎಸ್‌.ಜೆ. ಆನಂದ್‌, ರೈತ, ಸಾಮಾಜಿಕ ಹೋರಾಟಗಾರ, ಸಬ್ಬನಕುಪ್ಪೆ

20ಕೆಎಂಎನ್‌ ಡಿ9,10,11

9- ಕೆಆರ್‌ ಎಸ್‌ ಅಣೆಕಟ್ಟೆನೀರು ಸಂಗ್ರಹವಾಗಿರುವುದು.

10,11- ರೈತರು ಬೆಳೆದ ಕಬ್ಬು ಒಣಗುತ್ತಿರುವುದು.

ಬೆಳೆ ಒಣಗುತ್ತಿವೆ ಎಂದು ರೈತರು ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳ ಮೊರೆ ಹೋಗುತ್ತಿದ್ದರು. ಆಗ ಮುಖ್ಯಮಂತ್ರಿ ಅಥವಾ ಜಿಲ್ಲಾ ಉಸ್ತುವಾರಿ ಮಂತ್ರಿ ಅಧ್ಯಕ್ಷತೆಯ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ಸೇರಿ ನೀರು ಬಿಡುಗಡೆ ಬಗ್ಗೆ ಕ್ರಮ ಕೈಗೊಳ್ಳುತ್ತಿತ್ತು. ಸಭೆ ಸೇರುವುದು ವಿಳಂಬವಾದರೆ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಈಗ ಮಂಡಳಿ ರಚನೆಯಿಂದ ಈ ಸಲಹಾ ಸಮಿತಿ ಅಸ್ತಿತ್ವ ಕಳೆದುಕೊಂಡಿದೆ.

ಏನಿದು ಹೊಸ ವ್ಯವಸ್ಥೆ? ರೈತರು ನೀರು ಬೇಕು ಎಂದಾಕ್ಷಣ ಡ್ಯಾಂನಿಂದ ಹರಿಸಲು ಬರುವುದಿಲ್ಲ. ಬೆಳೆ ವಿವರ, ವಿಸ್ತೀರ್ಣ, ನೀರಿನ ಅಗತ್ಯತೆ ಕುರಿತ ಅಂಕಿ-ಅಂಶ ಒಳಗೊಂಡ ವರದಿಯನ್ನು ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ಅದನ್ನು ಆಧರಿಸಿ ಸರ್ಕಾರ ಕಾವೇರಿ ನೀರು ನಿರ್ವಹಣಾ ಮಂಡಳಿ’ಗೆ ಮನವಿ ಮಾಡಬೇಕು. ಮಂಡಳಿ ಸಭೆ ಸೇರಿ, ಪರಾಮರ್ಶೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.

Follow Us:
Download App:
  • android
  • ios