ಓ ನನ್ನ ಚೇತನ, ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ, ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ, ಆಗು ನೀ ಅನಿಕೇತನ!

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ, ಆಗು ನೀ ಅನಿಕೇತನ!

ರಾಷ್ಟ್ರಕವಿ ಕುವೆಂಪು ಅವರ ಈ ಗೀತೆಯನ್ನು, ವಿಶ್ವ ಮಾನವ ಸಂದೇಶವನ್ನು ಕೇಳದ, ಕೇಳಿ ಅನುಭವಿಸದ ಕನ್ನಡಿಗರು ಯಾರಿದ್ದಾರೆ. ಅದೆಷ್ಟು ವೇದಿಕೆಗಳಲ್ಲಿ ಈ ಗೀತೆಯ ಆನಂದವನ್ನು ಪಡೆದುಕೊಂಡಿದ್ದೇವೆಯೋ ಲೆಕ್ಕವೇ ಇಲ್ಲ. ಆದರೆ ರಾಷ್ಟ್ರಕವಿ ಕುವೆಂಪು ಅವರ ಧ್ವನಿಯಲ್ಲಿಯೇ ಈ ಗೀತೆಯನ್ನು ಕೇಳಿದ್ದೀರಾ? ಕೇಳದಿದ್ದರೆ ಇಲ್ಲಿದೆ ನೋಡಿ ಮಹಾಕವಿಯೇ ವಾಚಿಸಿದ ಕವನಾಮೃತ...