ಸಮ್ಮಿಶ್ರ ಸರ್ಕಾರದ ಋುಣಮುಕ್ತ ಸುಗ್ರೀವಾಜ್ಞೆ ವಿರುದ್ಧ ರಾಜ್ಯದ ಖಾಸಗಿ ಲೇವಾದೇವಿದಾರರು ತಿರುಗಿ ಬಿದ್ದಿದ್ದು, ಯಾವ ಕಾರಣಕ್ಕೂ ಸಾಲ ಮನ್ನಾ ಮಾಡಲು ಒಪ್ಪುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು : ‘ಸಮ್ಮಿಶ್ರ ಸರ್ಕಾರದ ಋುಣಮುಕ್ತ ಸುಗ್ರೀವಾಜ್ಞೆ ವಿರುದ್ಧ ರಾಜ್ಯದ ಖಾಸಗಿ ಲೇವಾದೇವಿದಾರರು ತಿರುಗಿ ಬಿದ್ದಿದ್ದು, ಯಾವ ಕಾರಣಕ್ಕೂ ಸಾಲ ಮನ್ನಾ ಮಾಡಲು ಒಪ್ಪುವುದಿಲ್ಲ. ಬೇಕಿದ್ದರೆ, ಬಡ್ಡಿ ಮನ್ನಾ ಮಾಡಲು ಸಿದ್ಧ. ನಮ್ಮ ಬೆವರಿನ ಹಣವಾದ ಅಸಲು ಮೊತ್ತವನ್ನು ಮನ್ನಾ ಮಾಡುವಂತೆ ಹೇಳುವುದು ಸರಿಯಲ್ಲ. ಒತ್ತಾಯ ಪಡಿಸಿದರೆ, ನಮ್ಮ ಲೈಸನ್ಸ್‌ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿ ಸಾಮೂಹಿಕವಾಗಿ ಈ ಉದ್ಯಮ ತ್ಯಜಿಸುತ್ತೇವೆ’ ಎಂದು ಅಖಿಲ ಕರ್ನಾಟಕ ಫೈನಾನ್ಸ್‌ ಅಸೋಸಿಯೇಷನ್‌ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅಸೋಸಿಯೇಷನ್‌ ಸಂಸ್ಥಾಪಕ ಅಧ್ಯಕ್ಷ ಜಯರಾಮ್‌ ಸೋಡಾ ಅವರು, ‘ದಶಕಗಳಿಂದ ರೈತರಿಗೆ ಅಗತ್ಯ ವೇಳೆಯಲ್ಲಿ ಸಾಲ-ಸಹಕಾರ ನೀಡುತ್ತಿರುವುದು ಗಿರವಿದಾರರು ಹಾಗೂ ಲೇವಾದೇವಿದಾರರು. ನಮಗೂ ಹಾಗೂ ರೈತರಿಗೆ ಸೌಹಾರ್ದಯುತ ಸಂಬಂಧವಿದೆ. ರೈತರು ಕಷ್ಟದಲ್ಲಿದ್ದಾರೆ ಎಂದಾದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲು ಸ್ವಯಂ ಪ್ರೇರಿತವಾಗಿ ನಾವೇ ಮುಂದೆ ಬರುತ್ತೇವೆ. ಆದರೆ, ನಮ್ಮ ಶ್ರಮದ ಹಣವನ್ನು ಮನ್ನಾ ಮಾಡುವ ಮೂಲಕ ನಮ್ಮ ಕುಟುಂಬಗಳನ್ನು ಹಾಳು ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ’ ಎಂದರು.

‘ನಮ್ಮ ಹಣವನ್ನು ಸಂಪೂರ್ಣ ಮನ್ನಾ ಮಾಡಿದರೆ ನಾವು ಬೀದಿಗೆ ಬೀಳಬೇಕಾಗುತ್ತದೆ. ಹೀಗಾಗಿ ಸರ್ಕಾರದ ಬಳಿ ಠೇವಣಿ ಹಣ ಇಟ್ಟು ಪರವಾನಗಿ ಪಡೆದು ವ್ಯವಹಾರ ಮಾಡುತ್ತಿರುವ ನಮ್ಮ ಮೇಲೆ ಗದಾ ಪ್ರಹಾರ ಮಾಡಬಾರದು. ಒಂದು ವೇಳೆ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಪರವಾನಗಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸುತ್ತೇವೆ ಹಾಗೂ ಈ ಉದ್ಯೋಗ ನಡೆಸಲು ಸರ್ಕಾರದ ಬಳಿ ನಾವು ಇಟ್ಟಿರುವ 155.5 ಕೋಟಿ ರು. ಠೇವಣಿಯನ್ನು ಹಿಂದಕ್ಕೆ ಪಡೆಯುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಎಸ್‌.ಎಂ. ಕೃಷ್ಣ ಅವಧಿಯಲ್ಲಿಯೂ ಗಿರವಿದಾರರು ಹಾಗೂ ಲೇವಾದೇವಿದಾರರಮೇಲೆ ಕ್ರಮ ಕೈಗೊಂಡಿದ್ದರು. ಆದರೆ, ಅವರು ಬಡ್ಡಿ ಮನ್ನಾ ಮಾಡಬೇಕು ಹಾಗೂ 3 ವರ್ಷದವರೆಗೆ ಸಾಲ ವಾಪಸಾತಿಗೆ ಕೇಳಬಾರದು ಎಂದು ಆದೇಶ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ. ಇದು ತೀರಾ ಅವೈಜ್ಞಾನಿಕ ಕ್ರಮ’ ಎಂದು ಅಸಮಧಾನ ವ್ಯಕ್ತಪಡಿಸಿದರು.

ಆರ್ಥಿಕ ವ್ಯವಸ್ಥೆಗೆ ಧಕ್ಕೆ:

‘1976 ಹಾಗೂ 80ರಲ್ಲಿ ಕಾನೂನುಬದ್ಧವಾಗಿ ಲೇವಾದೇವಿ ಹಾಗೂ ಗಿರವಿ ನಡೆಸುತ್ತಿದ್ದವರು ತುಂಬಾ ಕಡಿಮೆ ಇದ್ದರು. ಸಾಲ ನೀಡಿ ದೌರ್ಜನ್ಯ ಮಾಡುತ್ತಿದ್ದ ಒಂದು ವರ್ಗದವರಿಂದ ರೈತರು ಶೋಷಣೆಗೆ ಒಳಗಾಗುತ್ತಿದ್ದರು. ಆ ವೇಳೆಯಲ್ಲಿ ಋುಣ ಪರಿಹಾರ ಅಧಿನಿಯಮ ಜಾರಿಗೆ ತಂದಿದ್ದು ಸೂಕ್ತವಾಗಿತ್ತು. ಆದರೆ, ಇದೀಗ 12 ಸಾವಿರ ಮಂದಿ ಲೇವಾದೇವಿದಾರರು ಹಾಗೂ 8 ಸಾವಿರ ಮಂದಿ ಗಿರವಿದಾರರು ಸಹಕಾರ ಇಲಾಖೆ ಲೇವಾದೇವಿ ಕಾಯ್ದೆ ಪ್ರಕಾರ ಪರವಾನಗಿ ಪಡೆದು ವ್ಯವಹಾರ ನಡೆಸುತ್ತಿದ್ದೇವೆ. ನಮ್ಮ ವಹಿವಾಟನ್ನು ಕಸಿದುಕೊಳ್ಳುವುದು ತಪ್ಪು.’

‘ಇದರಿಂದ ತಳಮಟ್ಟದಲ್ಲಿ ರೈತರು ಹಾಗೂ ಲೇವಾದೇವಿದಾರರು ನಡುವಿನ ಸಂಬಂಧ ಹಾಳಾಗಲಿದೆ. ತಳಮಟ್ಟದಲ್ಲಿ ಕಡಿಮೆ ಮೊತ್ತದ ಆರ್ಥಿಕ ವ್ಯವಹಾರಗೆ ತಡೆ ಬೀಳುತ್ತದೆ. ಬಡವರಿಗೆ ತುರ್ತು ಸಂಧರ್ಭದಲ್ಲಿ ಹಣ ಹುಟ್ಟದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಪರೋಕ್ಷವಾಗಿ ಬಡವರು ಹಾಗೂ ಬಡವರಿಗೆ ಆರ್ಥಿಕ ಸಹಾಯ ಮಾಡುವವರ ಮೇಲೆ ನಡೆಸುತ್ತಿರುವ ಗದಾಪ್ರಹಾರ. ಪ್ರಚಾರಕ್ಕಾಗಿ ಇಂತಹ ಕಾನೂನುಗಳನ್ನು ತರುವುದು ಬೇಡ’ ಎಂದು ಲೇವಾದೇವಿದಾರರು ಒತ್ತಾಯ ಮಾಡಿದ್ದಾರೆ.

16 ಸಾವಿರ ಮಂದಿಗೆ ಪರವಾನಗಿ:

ಹಣಕಾಸು ಲೇವಾದೇವಿ ಕಾಯ್ದೆ -1961 ರ ಪ್ರಕಾರ ಸಹಕಾರ ಇಲಾಖೆಯು 2017ರ ಮಾಚ್‌ರ್‍ವರೆಗೆ 5,380 ಮಂದಿ ಲೇವಾದೇವಿದಾರರು, 8734 ಗಿರಿವಿದಾರರಿಗೆ ಪರವಾನಗಿ ನೀಡಿದೆ. ಇತ್ತೀಚೆಗೆ 508 ಪರವಾನಗಿ ನೀಡಲಾಗಿದೆ ಎಂದು ಸಹಕಾರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇವರು 1 ಲಕ್ಷ ರು.ವರೆಗಿನ ವ್ಯವಹಾರಕ್ಕೆ 5 ಸಾವಿರ ರು., ವಾರ್ಷಿಕ 10 ಲಕ್ಷ ರು. ವಹಿವಾಟು ನಡೆಸುವವರಿಗೆ 50 ಸಾವಿರ ರು. ಹೀಗೆ ನೂರಾರು ಕೋಟಿ ರು. ಸಹಕಾರಿ ಇಲಾಖೆಯೊಂದಿಗೆ ಠೇವಣಿ ಇಟ್ಟಿದ್ದಾರೆ. ಸಾಲ ಮನ್ನಾಗೆ ಒತ್ತಾಯ ಮಾಡಿದರೆ ಠೇವಣಿ ಹಿಂಪಡೆದು ಉದ್ಯಮವನ್ನೇ ತ್ಯಜಿಸುವ ಬೆದರಿಕೆಯೊಡ್ಡಿದ್ದಾರೆ.

ಹಣಕಾಸು ವಿಶ್ವಾಸಕ್ಕೆ ಧಕ್ಕೆ:

ಖಾಸಗಿ ಲೇವಾದೇವಿದಾರರು ಹಾಗೂ ಗಿರವಿದಾರರನ್ನು ಹೊರತುಪಡಿಸಿ ಕೈ ಸಾಲ ನೀಡಿದವರು, ಸಂಬಂಧಿಕರು ಹಾಗೂ ಸ್ನೇಹಿತರ ನಡುವೆ ವಿಶ್ವಾಸಘಾತುಕ ಕೆಲಸಗಳಿಗೆ ಅಧಿನಿಯಮ ಅವಕಾಶ ಮಾಡಿಕೊಡುತ್ತದೆ. ವಿಶ್ವಾಸದ ಮೇಲೆ ನೀಡಿರುವ ಸಾಲವನ್ನು ಹಿಂತಿರುಗಿಸದೆ ಇದ್ದರೆ ಪರಸ್ಪರ ಮನಸ್ತಾಪ ಹಾಗೂ ಸಂಬಂಧಗಳನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ.

ಜತೆಗೆ, ಸಾವಿರಾರು ಮಂದಿ ಬಡವರೇ ಮತ್ತೊಬ್ಬ ಬಡವರಿಗೆ ಕೈ ಸಾಲ ನೀಡಿರುತ್ತಾರೆ. 1.25 ಲಕ್ಷ ರು.ಗಿಂತ ಕಡಿಮೆ ವರಮಾನ ಇರುವವರ ಸಾಲ ಮನ್ನಾ ಎಂದು ಹೇಳಲಾಗಿದೆ. ಆದರೆ, ಸಾಲ ಕೊಟ್ಟವರು ಬಡವರು. ಅವರಿಗೆ ಅನ್ಯಾಯವಾಗುವುದಿಲ್ಲವೇ? ಸಾಲ ವಾಪಸು ನೀಡದಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲವೇ ಎಂದು ಜಯರಾಮ್‌ ಸೋಡಾ ಪ್ರಶ್ನೆ ಮಾಡಿದ್ದಾರೆ.

ಶ್ರೀಕಾಂತ್‌ ಎನ್‌. ಗೌಡಸಂದ್ರ