ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತವರೂರು ಹಾಸನದಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧ್ಯಕ್ಷರ ಆಯ್ಕೆ ವೇಳೆ ದೋಸ್ತಿಗಳ ನಡುವೆ ಭಾರೀ ಕುಸ್ತಿ ನಡೆಯಿತು.

ಹಾಸನ [ಸೆ.29] :  ಅತ್ತ ಬೆಂಗಳೂರಿನಲ್ಲಿ ಬಿಬಿಎಂಪಿ ಮೇಯರ್‌ ಪಟ್ಟಉಳಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಮುಂದುವರಿದರೆ, ಇತ್ತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತವರೂರು ಹಾಸನದಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧ್ಯಕ್ಷರ ಆಯ್ಕೆ ವೇಳೆ ದೋಸ್ತಿಗಳ ನಡುವೆ ಭಾರೀ ಕುಸ್ತಿ ನಡೆಯಿತು. ಸಚಿವ ಎಚ್‌.ಡಿ.ರೇವಣ್ಣ ಪತ್ನಿ, ಜಿಪಂ ಸದಸ್ಯೆ ಭವಾನಿ ರೇವಣ್ಣ ಅವರಂತೂ ‘ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೇವೆ’ ಎಂದು ಹೇಳಿದ ಮಾಜಿ ಸಚಿವ ಎ.ಮಂಜು ಪುತ್ರ ಮಂಥರ್‌ಗೌಡ ಅವರನ್ನು ಎಲ್ಲರೆದುರೇ ತೀವ್ರ ತರಾಟೆಗೆ ತೆಗೆದುಕೊಂಡರು. ‘ಸಿಎಂ ಮಾಡಿ ಎಂದು ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ಐದು ಸ್ಥಾಯಿ ಸಮಿತಿಯ ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಒಂದು ಅಧ್ಯಕ್ಷಗಿರಿ ಸೇರಿ ಒಟ್ಟು 10 ಸ್ಥಾಯಿ ಸಮಿತಿ ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ, ಉಳಿದ ಸ್ಥಾನಗಳಿಗೆ ಜೆಡಿಎಸ್‌ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ವೇಳೆ ಕಾಂಗ್ರೆಸ್‌ ಸದಸ್ಯ ಎಸ್‌.ಪಿ. ರೇವಣ್ಣ ಅವರನ್ನು ಹಣಕಾಸು ಸ್ಥಾಯಿ ಸಮಿತಿಗೆ, ಬಿ.ಎಂ. ರವಿ ಅವರನ್ನು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಸದಸ್ಯರನ್ನಾಗಿ ಮಾಡುವಂತೆ ಮಂಥರ್‌ ಗೌಡ ಮತ್ತಿತರರು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಅಧ್ಯಕ್ಷರು ಸೇರಿ 10 ಮಂದಿ ಸದಸ್ಯರ ಸ್ಥಾನವನ್ನು ಕಾಂಗ್ರೆಸ್‌ ಸದಸ್ಯರಿಗೆ ನೀಡಲಾಗಿದೆ. ಯಾರು ಯಾವ ಸ್ಥಾಯಿ ಸಮಿತಿಗಳಿಗೆ ಸದಸ್ಯರಾಗಬೇಕು ಎಂಬುದು ನಮಗೆ ಬಿಟ್ಟವಿಚಾರ. ನಾವು ಯಾವ ಸಮಿತಿಗೆ ಹಾಕುತ್ತೇವೆ, ಆ ಸಮಿತಿಗೆ ಸದಸ್ಯರು ಹೋಗಬೇಕು ಅಷ್ಟೇ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯರು, ನಮ್ಮ ಸದಸ್ಯರು ಯಾವ ಸಮಿತಿಗೆ ಹೋಗಬೇಕು ಎಂಬ ತೀರ್ಮಾನ ನಮಗೇ ಬಿಡಿ, ಬಲವಂತವಾಗಿ ಇಷ್ಟವಿಲ್ಲದ ಸಮಿತಿಗಳಿಗೆ ಸದಸ್ಯರನ್ನು ನಿಯೋಜಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಮಂಥರ್‌ಗೌಡ, ರಾಜ್ಯದಲ್ಲಿ ಕೇವಲ 37 ಸ್ಥಾನ ಗೆದ್ದಿರುವ ನಿಮ್ಮ ಪಕ್ಷ (ಜೆಡಿಎಸ್‌)ಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಿಲ್ಲವೇ? ಅಲ್ಲಿ ಒಂದು ನ್ಯಾಯ, ಇಲ್ಲಿ ಒಂದು ನ್ಯಾಯವೇ? ಎಂದು ಕಿಡಿಕಾರಿದರು.

ಈ ವೇಳೆ ಅಲ್ಲೇ ಇದ್ದ ಭವಾನಿ ರೇವಣ್ಣ ಎದ್ದು ನಿಂತು ಮಂಥರ್‌ ಗೌಡ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಅಧಿಕಾರ ಕೊಡಿ ಅಂತ ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಮಧ್ಯಾಹ್ನದ ಹೊತ್ತಿಗೆ ಮನೆ ಬಾಗಿಲಿಗೆ ಯಾರು ಬಂದದ್ದು ಗೊತ್ತಿಲ್ವಾ? ಸರ್ಕಾರ ರಚನೆ ವಿಷಯವನ್ನು ಇಲ್ಲಿ ಮಾತನಾಡಕೂಡದು. ಅದನ್ನು ವಿಧಾನಸೌಧದಲ್ಲಿ ದೊಡ್ಡವರು ಮಾತನಾಡಿಕೊಳ್ಳುತ್ತಾರೆ’ ಎಂದು ತಿರುಗೇಟು ನೀಡಿದರು. ಈ ಹೇಳಿಕೆ ಬಳಿಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ತೀವ್ರ ವಾಗ್ವಾದ ಶುರುವಾಯಿತು.

ಆಗ ಮಧ್ಯಪ್ರವೇಶಿಸಿದ ಶಾಸಕರಾದ ಸಿ.ಎನ್‌.ಬಾಲಕೃಷ್ಣ ಮತ್ತು ಕೆ.ಎಂ.ಶಿವಲಿಂಗೇಗೌಡ, ವಿಧಾನಸೌಧದ ವಿಚಾರ ಇಲ್ಲಿ ಚರ್ಚೆ ಮಾಡುವುದು ಸರಿಯಲ್ಲ. ಈ ರೀತಿ ಗಲಾಟೆ ಮಾಡಿಕೊಂಡರೆ ಕೆಟ್ಟಸಂದೇಶ ಹೋಗಲಿದೆ ಎಂದು ಮನವಿ ಮಾಡಿದರು. ಕೊನೆಗೆ ಅಂತಿಮ ತೀರ್ಮಾನವೊಂದಕ್ಕೆ ಬಂದು ಐದು ಸ್ಥಾಯಿ ಸಮಿತಿಗೆ ಸದಸ್ಯರನ್ನು ಮತ್ತು ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾಂಗ್ರೆಸ್‌ಗೆ ಒಂದು ಅಧ್ಯಕ್ಷ ಸ್ಥಾನ ನೀಡಿ, 9 ಸದಸ್ಯ ಸ್ಥಾನ ಬಿಟ್ಟುಕೊಡಲಾಯಿತು.

ಒಟ್ಟು 40 ಮಂದಿ ಸಂಖ್ಯಾಬಲದ ಹಾಸನ ಜಿಪಂನಲ್ಲಿ ಜೆಡಿಎಸ್‌ 25 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್‌ ಸದಸ್ಯರ ಸಂಖ್ಯೆ 16 ಇದೆ. ಒಟ್ಟು 35 ಸ್ಥಾಯಿ ಸಮಿತಿ ಸದಸ್ಯ, ಅಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು.