ಗಂಡ ಹೆಂಡತಿ ಚಿತ್ರಕ್ಕಿಂತಲೂ ಕೂಡ ಹೆಚ್ಚು ಹಸಿ ಬಿಸಿ ದೃಶ್ಯಗಳಿರುವ ಈ ಚಿತ್ರವನ್ನೂ ರಿಮೇಕ್ ಮಾಡೋಣ ಎಂದು ಸಂಜಾನ ಹೇಳಿದ್ದರು ನಿರ್ದೇಶಕ ರವಿ ಶ್ರೀ ವತ್ಸ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು : ‘ನಟಿ ಸಂಜನಾ ಅ.14ರವರೆಗೂ ನನ್ನ ಸಂಪರ್ಕದಲ್ಲಿದ್ದರು. ಹುಟ್ಟುಹಬ್ಬಕ್ಕೂ ಕರೆದಿದ್ದರು. ಇದೇ ಸಂಜನಾ ‘ಗಂಡ ಹೆಂಡತಿ’ ಬಂದು ಹೋದ ನಂತರ ಕೆಲವು ವರ್ಷಗಳಲ್ಲಿ ಅವಕಾಶಗಳಿಲ್ಲದೆ ಮನೆಯಲ್ಲಿ ಕುಳಿತಿದ್ದಾಗ ನನ್ನ ಬಳಿ ಬಂದು ಹಿಂದಿಯ ‘ಜಿಸ್ಮ್’ ಚಿತ್ರವನ್ನು ಕನ್ನಡದಲ್ಲಿ ಮಾಡೋಣ ಅಂದಿದ್ದರು. ಆ ಸಿನಿಮಾದಲ್ಲಿ ‘ಗಂಡ ಹೆಂಡತಿ’ ಸಿನಿಮಾಗಿಂತ ಹೆಚ್ಚಿನ ಹಸಿಬಿಸಿ ದೃಶ್ಯಗಳಿದ್ದವು. ಆದರೆ ಹೆಣ್ಣಿನ ಬಗ್ಗೆ ಗೌರವ ಇರುವುದರಿಂದ ಬೇಡ ಎಂದಿದ್ದೆ.’
- ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಸಂಗತಿ ಬಹಿರಂಗ ಪಡಿಸಿದ್ದು ನಿರ್ದೇಶಕ ರವಿ ಶ್ರೀವತ್ಸ.
‘ಗಂಡ ಹೆಂಡತಿ’ ಚಿತ್ರದಲ್ಲಿ ಚುಂಬನ ದೃಶ್ಯಗಳ ಕುರಿತಾಗಿ ಆರೋಪ ಮಾಡಿದ್ದ ಸಂಜನಾ ಅವರು ಅದಕ್ಕಿಂತ ಹೆಚ್ಚು ಹಸಿಬಿಸಿ ದೃಶ್ಯಗಳಿರುವ ‘ಜಿಸ್‌್ಮ’ ಚಿತ್ರವನ್ನು ರೀಮೇಕ್ ಮಾಡಲು ಕೇಳಿಕೊಂಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ. ರವಿ ಶ್ರೀವತ್ಸ ಹೇಳಿಕೆಯಿಂದ ಸಂಜನಾ ‘ಮೀ ಟೂ’ ಆರೋಪದ ಕುರಿತಾಗಿಯೇ ಸಂಶಯ ವ್ಯಕ್ತವಾಗಿದೆ. ಇತ್ತೀಚಿನ ದಿನಗಳವರೆಗೂ ನಿರ್ದೇಶಕರ ಸಂಪರ್ಕದಲ್ಲಿದ್ದ ಸಂಜನಾ ಇದೀಗ ಏಕಾಏಕಿ ಆರೋಪ ಮಾಡಿ ವಿನಾಕಾರಣ ತೇಜೋವಧೆಗೆ ಮುಂದಾದರೇ ಎಂಬ ಅನುಮಾನ ಹುಟ್ಟಿಕೊಂಡಿದೆ.
ಸಂಜನಾ ಕ್ಷಮೆಗೆ ನಿರ್ದೇಶಕರ ಆಗ್ರಹ: ಸಂಜನಾ ಗಲ್ರಾನಿ ಮಾಡಿರುವ ‘ಮೀ ಟೂ’ ಆರೋಪವನ್ನು ನಿರ್ದೇಶಕರ ಸಂಘ ಅಲ್ಲಗಳೆದಿದೆ. ‘ಮೀ ಟೂ’ ಅಭಿಯಾನಕ್ಕೂ ಸಂಜನಾ ಮಾಡಿರುವ ಆರೋಪಕ್ಕೂ ಸಂಬಂಧವೇ ಇಲ್ಲ. ಕೇವಲ ಪ್ರಚಾರಕ್ಕಾಗಿ ಸಂಜನಾ ‘ಮೀ ಟೂ’ ಅಭಿಯಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನಿರ್ದೇಶಕರ ಸಂಘ ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ತಿಳಿಸಿದರು.
‘ಗಂಡ ಹೆಂಡತಿ’ ಚಿತ್ರದ ಪೋಸ್ಟರ್‌ಗಳು ಹಾಗೂ ಸಂಜನಾ ಆ ಸಂದರ್ಭದಲ್ಲಿ ನೀಡಿದ ಪತ್ರಿಕಾ ಹೇಳಿಕೆಗಳನ್ನು ತೋರಿಸಿದ ಅವರು ಸಂಜನಾ ‘ಮೀ ಟೂ’ ಅಭಿಯಾನವನ್ನೇ ದುರುಪಯೋಗ ಪಡಿಸಿಕೊಂಡು ಸಭ್ಯ ವ್ಯಕ್ತಿಗಳ ಮುಖಕ್ಕೆ ಮಸಿ ಬಳಿಯಲು ಹೊರಟಿದ್ದಾರೆ. ಒಬ್ಬ ನಿರ್ದೇಶಕನ ತೇಜೋವಧೆ ಮಾಡಿದ ಸಂಜನಾ ಆರೋಪವನ್ನು ನಿರ್ದೇಶಕರ ಸಂಘ ಗಂಭೀರವಾಗಿ ಪರಿಗಣಿಸಿದೆ. ರವಿ ಶ್ರೀವತ್ಸ ಸಂಘಕ್ಕೆ ದೂರು ನೀಡಿ ನ್ಯಾಯ ಬೇಕು ಎಂದು ಕೇಳಿದ್ದಾರೆ. ತಮ್ಮ ಮೇಲಿನ ಆರೋಪ ನಿರಾಧಾರವಾದದ್ದು ಎಂಬುದಕ್ಕೆ ಸಾಕ್ಷ್ಯಾಧಾರ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜನಾ ತಕ್ಷಣವೇ ರವಿ ಶ್ರೀವತ್ಸ ಅವರ ಕ್ಷಮೆ ಕೇಳಬೇಕು. ಆ ಕೆಲಸ ಮಾಡದಿದ್ದರೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಕಲಾವಿದರ ಸಂಘ ಮತ್ತು ನಿರ್ದೇಶಕರ ಸಂಘದ ಪದಾಧಿಕಾರಿಗಳು ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅದೇನು ಎನ್ನುವುದನ್ನು ಅವರೇ ಕಾದು ನೋಡಲಿ ಎಂದು ಅವರು ಎಚ್ಚರಿಸಿದರು.
ಶ್ರುತಿ ಹರಿಹರನ್‌ಗೆ ರವಿ ಶ್ರೀವತ್ಸ ವಿರೋಧ: ಇದೇ ಸಂದರ್ಭದಲ್ಲಿ ರವಿ ಶ್ರೀವತ್ಸ ಅವರು ಸಂಂಜನಾ ಹೇಳಿಕೆ ಬೆಂಬಲಿಸಿ ಟ್ವೀಟ್ ಮಾಡಿದ ಶ್ರುತಿ ಹರಿಹರನ್‌ರನ್ನು ತರಾಟೆಗೆ ತೆಗೆದುಕೊಂಡರು. ಅವರು ತಮ್ಮ ಕೆಲಸ ನೋಡಿಕೊಳ್ಳಲಿ. ಈ ರೀತಿ ಯಾರನ್ನೋ ಬೆಂಬಲಿಸಿ ಪೋಸು ಕೊಡುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರ ಸಂಘದ ಪದಾಧಿಕಾರಿಗಳಾದ ಮುಸ್ಸಂಜೆ ಮಹೇಶ್, ಟಿ.ಎನ್. ನಾಗೇಶ್, ವಿಕ್ಟರಿ ವಾಸು ಮತ್ತಿತರರು ಹಾಜರಿದ್ದರು.
