ರಾಷ್ಟ್ರದಲ್ಲಿ ನಾಗರಿಕರ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎನ್ನುವ ಮೂಲಕ ವಿಡಿಯೋ ಒಂದರಲ್ಲಿ ಶಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನವದೆಹಲಿ[ಜ.05]: ಭಾರತದಲ್ಲಿರುವ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿ ಸುದ್ದಿಯಾಗಿದ್ದ ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ ಅವರು, ಇದೀಗ ರಾಷ್ಟ್ರದಲ್ಲಿ ನಾಗರಿಕರ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಮಾನವ ಹಕ್ಕುಗಳ ಕಣ್ಗಾವಲು ವಹಿಸುವ ಆ್ಯಮ್ನೆಸ್ಟಿಇಂಡಿಯಾ ಎನ್‌ಜಿಒ ಬಿಡುಗಡೆ ಮಾಡಿರುವ 2.13 ನಿಮಿಷದಲ್ಲಿ ನಾಸಿರುದ್ದೀನ್‌ ಶಾ ಅವರು, ಭಾರತದಲ್ಲಿ ಧರ್ಮದ ಹೆಸರಿನಲ್ಲಿ ಹಗೆತನವನ್ನು ಹರಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಲಾವಿದರು, ನಟರು, ಪಂಡಿತರು, ಕವಿಗಳು ಸೇರಿದಂತೆ ಇತರರ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಅಲ್ಲದೆ, ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕಾದ ಪತ್ರಕರ್ತರ ಧ್ವನಿಯನ್ನು ಸಹ ಅಡಗಿಸಲಾಗುತ್ತಿದೆ. ಅಮಾಯಕರನ್ನು ಹತ್ಯೆ ಮಾಡುತ್ತಿದೆ.

Scroll to load tweet…

ಹಾಗಾಗಿ, ದೇಶವು ಭಯಾನಕ ಮತ್ತು ಕ್ರೌರ್ಯದ ಅಲೆಯಲ್ಲಿ ತೇಲುತ್ತಿದೆ. ಇವುಗಳ ವಿರುದ್ಧ ಧ್ವನಿಯೆತ್ತಿದವರ ಬಾಯಿ ಮುಚ್ಚಿಸಲು ಅವರ ಕಚೇರಿಗಳ ಮೇಲೆ ದಾಳಿ, ಬ್ಯಾಂಕ್‌ ಖಾತೆಗಳ ಜಪ್ತಿ, ಕಂಪನಿಯ ಪರವಾನಗಿ ರದ್ದು ಮಾಡಲಾಗುತ್ತಿದೆ,’ ಎಂದು ನಾಸಿರುದ್ದೀನ್‌ ಶಾ ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.