Asianet Suvarna News Asianet Suvarna News

ಉಲ್ಟಾ ಹೊಡೆದ ಸಚಿವ ಜಮೀರ್‌ ಅಹಮದ್

ವಕ್ಫ್ ಸಚಿವ ಜಮೀರ್ ಅಹಮದ್‌ ಮೊದಲು ಒಂದು ಹೇಳಿಕೆ ನೀಡಿ ಬಳಿಕ ಉಲ್ಟಾಹೊಡೆದ ಪ್ರಸಂಗ ನಡೆದಿದೆ. ವಕ್ಫ್ ಆಸ್ತಿ ದುರ್ಬಳಕೆ ಕುರಿತಂತೆ ಅನ್ವರ್‌ ಮಾಣಿಪ್ಪಾಡಿ ಅವರು ಸಲ್ಲಿಸಿದ ವರದಿಯಲ್ಲಿನ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸುವುದಾಗಿ ವಕ್ಫ್ ಸಚಿವ ಜಮೀರ್ ಅಹಮದ್‌ ಉಲ್ಟಾ ಹೊಡೆದಿದ್ದಾರೆ. 

Wakf assets misuse Zameer promises CBI probe, backtracks
Author
Bengaluru, First Published Jul 13, 2018, 9:05 AM IST

ವಿಧಾನಪರಿಷತ್‌ :  ವಕ್ಫ್ ಆಸ್ತಿ ದುರ್ಬಳಕೆ ಕುರಿತಂತೆ ಅನ್ವರ್‌ ಮಾಣಿಪ್ಪಾಡಿ ಅವರು ಸಲ್ಲಿಸಿದ ವರದಿಯಲ್ಲಿನ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸುವುದಾಗಿ ವಕ್ಫ್ ಸಚಿವ ಜಮೀರ್ ಅಹಮದ್‌ ಹೇಳಿ, ಬಳಿಕ ಉಲ್ಟಾಹೊಡೆದ ಪ್ರಸಂಗ ನಡೆಯಿತು.

ಪ್ರಶ್ನೋತ್ತರ ವೇಳೆ ಬಿಜೆಪಿಯ ಅರುಣ ಶಹಾಪುರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾಣಿಪ್ಪಾಡಿ ಅವರು ಸಲ್ಲಿಸಿದ ವರದಿಯ ಸಾರಾಂಶಗಳನ್ನು ಉಭಯ ಸದನದಲ್ಲಿ ಮಂಡಿಸಲಾಗಿದೆ. ಆದರೆ ಸಚಿವ ಸಂಪುಟ ವರದಿಯನ್ನು ತಿರಸ್ಕರಿಸಿದೆ. ಆ ವರದಿಯಲ್ಲಿ ಸತ್ಯಾಂಶ ಇಲ್ಲ ಎಂದು ತಮಗೆ ಅನಿಸುತ್ತದೆ ಎಂದರು.

ಆದರೆ ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಕ್ಫ್ಗಳಿಗೆ ಸೇರಿದ ಲಕ್ಷಾಂತರ ಕೋಟಿ ಬೆಲೆಯ ಆಸ್ತಿಯನ್ನು ಕಬಳಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗಾಗಿ ಸಮಗ್ರವಾದ ವರದಿಯನ್ನು ಸದನದಲ್ಲಿ ಮಂಡಿಸಬೇಕು, ಸರ್ಕಾರ ಮಂಡಿಸದಿದ್ದರೆ ಸರ್ಕಾರ ಏನೋ ಮುಚ್ಚಿಡಲು ಹೊರಟಿದೆ ಎಂದು ಭಾವಿಸಬೇಕಾಗುತ್ತದೆ ಎಂದರು.

ಅಕ್ರಮ ನಡೆದಿರುವ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದಾಗ, ಸಚಿವ ಜಮೀರ ಅಹಮದ್‌, ಬಿಜೆಪಿ ಅಧಿಕಾರದಲ್ಲಿದ್ದಾಗಲೇ ವರದಿ ಮಂಡನೆ ಮಾಡಲಾಗಿತ್ತು. ವರದಿ ಸಲ್ಲಿಕೆ ನಂತರ ಒಂದೂವರೆ ವರ್ಷಗಳ ಕಾಲ ಹಾಗೆ ಉಳಿಸಿಕೊಳ್ಳಲಾಗಿತ್ತು. ಆಗ ಯಾಕೆ ಸಿಬಿಐ ತನಿಖೆಗೆ ನೀಡಲಿಲ್ಲ ಎಂದು ಪ್ರಶ್ನಿಸಿದಾಗ, ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿ ಸದಸ್ಯರು, ಈಗ ಅಧಿಕಾರದಲ್ಲಿದ್ದೀರಿ. ಸಿಬಿಐಗೆ ಕೊಡಿ ಎಂದು ಆಗ್ರಹಿಸಿದರು. ಸದಸ್ಯರ ಒತ್ತಾಯಕ್ಕೆ ಮಣಿದ ಸಚಿವ ಜಮೀರ್‌ ಅಹಮದ್‌ ಆಯ್ತು ಸಿಬಿಐ ತನಿಖೆಗೆ ಕೊಡೋಣ ಬಿಡಿ ಎಂದರು. ಬಿಜೆಪಿ ಸದಸ್ಯರು ಇದೇ ಮಾತನ್ನು ಹಿಡಿದುಕೊಂಡು ಸಚಿವರು ಸಿಬಿಐ ತನಿಖೆಗೆ ಒಪ್ಪಿದ್ದಾರೆ ಎಂಬುದನ್ನು ಸಭಾಪತಿಗಳು ಗಮನಿಸಬೇಕು ಎಂದು ಹೇಳಿದರು.

ಯೂ ಟರ್ನ್‌ ಜಮೀರ್‌:

ಕಾಂಗ್ರೆಸ್‌ನ ಅಬ್ದುಲ್‌ ಜಬ್ಬಾರ್‌, ಸಚಿವ ಯು.ಟಿ.ಖಾದರ್‌ ಅವರು ಈ ವಿಷಯ ಹೈಕೋರ್ಟ್‌ನಲ್ಲಿ ಇರುವುದರಿಂದ ಸಿಬಿಐ ತನಿಖೆಗೆ ನೀಡಲು ಬರುವುದಿಲ್ಲ ಎಂದು ಸದನದ ಗಮನ ಸೆಳೆದರು. ಈ ವೇಳೆ ತಾವು ನೀಡಿದ ಭರವಸೆಯ ಪರಿಣಾಮದ ಗಂಭೀರತೆ ಅರಿತು, ಸಿಬಿಐ ತನಿಖೆಗೆ ಒಪ್ಪಿಸುವ ವಿಷಯದ ಬಗ್ಗೆ ‘ನೋಡ್ತೇನೆ’ ಎಂದು ಹೇಳಿದ್ದೇನೆ ಹೊರತು, ‘ಮಾಡ್ತೇನೆ’ ಎಂದು ಹೇಳಿಲ್ಲ ಎಂದು ಸಮಜಾಯಿಸಿ ನೀಡಿದರು. ಆದರೆ ಸಚಿವರ ಮಾತಿಗೆ ಬಿಜೆಪಿ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದಾಗ ಸಭಾಪತಿ ಹೊರಟ್ಟಿಅವರು, ಸಚಿವ ಜಮೀರ್‌ ಅಹಮದ್‌ ಹೇಳಿರುವ ಮಾತಿನ ಬಗ್ಗೆ ಕಡತ ಪರಿಶೀಲಿಸಿ ತಿಳಿಸುವುದಾಗಿ ಹೇಳಿ ಮುಂದಿನ ಕಲಾಪ ಕೈಗೆತ್ತಿಕೊಂಡರು.

Follow Us:
Download App:
  • android
  • ios