ಮತಪಟ್ಟಿಗೆ ಹೆಸರು ಸೇರಿಸಲು ಇನ್ನು ಮೂರೇ ದಿನ ಬಾಕಿ

First Published 12, Apr 2018, 8:21 AM IST
Voter List Check Name on Election Voter List 3 Days Left
Highlights

ಮತದಾರರ ಪಟ್ಟಿಯಲ್ಲಿ ಇನ್ನೂ ಹೆಸರು ನೋಂದಣಿ ಮಾಡದೇ ಇರುವವರು ಹಾಗೂ ತಿದ್ದುಪಡಿ ಮಾಡಲು ಬಯಸುವವರಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು ಕೇವಲ ಮೂರು ದಿನಗಳು ಮಾತ್ರ ಬಾಕಿ ಇದೆ.

ಬೆಂಗಳೂರು : ಮತದಾರರ ಪಟ್ಟಿಯಲ್ಲಿ ಇನ್ನೂ ಹೆಸರು ನೋಂದಣಿ ಮಾಡದೇ ಇರುವವರು ಹಾಗೂ ತಿದ್ದುಪಡಿ ಮಾಡಲು ಬಯಸುವವರಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು ಕೇವಲ ಮೂರು ದಿನಗಳು ಮಾತ್ರ ಬಾಕಿ ಇದೆ.

ಹೌದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ತಿದ್ದುಪಡಿ ಮಾಡಲು ಏ.14ಕ್ಕೆ ಕೊನೆಯ ದಿನಾಂಕವಾಗಿದೆ. ನಾನಾ ಕಾರಣಗಳಿಂದ ಹೆಸರು ಸೇರ್ಪಡಿಸಲು, ತಿದ್ದುಪಡಿ ಮಾಡಲು ಮತ್ತು ಹೆಸರು ತೆಗೆದುಹಾಕಲು ಸಾಧ್ಯವಾಗಿದ್ದರೆ ಇನ್ನು ಮೂರು ದಿನಗಳ ಕಾಲ ಮಾತ್ರ ಕಾಲಾವಕಾಶ ಇದೆ. ಅಷ್ಟರಲ್ಲಿ ಅರ್ಜಿ ಸಲ್ಲಿಸಿ ಹೆಸರು ನೋಂದಣಿ, ತಿದ್ದುಪಡಿ ಮಾಡಿಸಬಹುದು. ಏ.17ಕ್ಕೆ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಏ.14ಕ್ಕೆ ಅಂತಿಮ ಗಡುವು ನೀಡಿದೆ. ಒಂದು ವೇಳೆ ಅರ್ಜಿ ಸಲ್ಲಿಕೆ ಮಾಡದಿದ್ದರೆ ಮುಂದಿನ ಚುನಾವಣೆವರೆಗೆ ಕಾಯಬೇಕಾಗುತ್ತದೆ.

ಮತದಾರರ ಹೆಸರು ನೋಂದಣಿ, ತಿದ್ದುಪಡಿ ಕುರಿತು ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಈಗಾಗಲೇ ಜಾಗೃತಿ ಮೂಡಿಸುತ್ತಿದೆ. ಕಳೆದ ಭಾನುವಾರದಂದು ಮಿಂಚಿನ ನೋಂದಣಿ ಹೆಸರಲ್ಲಿ ಅಭಿಯಾನ ನಡೆಸಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ 6.45 ಲಕ್ಷ ಅರ್ಜಿ ಸ್ವೀಕಾರವಾಗಿವೆ. ಫೆ.28ಕ್ಕೆ ಅರ್ಜಿಗಳ ಪರಿಶೀಲನೆಯಂತೆ 4.96 ಕೋಟಿ ಮತದಾರರಿದ್ದಾರೆ. ನಂತರವೂ ಹೆಸರು ಸೇರ್ಪಡೆ ಮತ್ತು ತಿದ್ದುಪಡಿ ಕಾರ್ಯ ಮುಂದುವರಿದಿದೆ. ಇನ್ನೂ ಮೂರು ದಿನಗಳು ಮಾತ್ರ ಕಾಲಾವಕಾಶ ಇದೆ. ನಂತರ ಸಲ್ಲಿಕೆ ಮಾಡುವ ಅರ್ಜಿಗಳನ್ನು ಆಯೋಗವು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ.

ನಾಗರಿಕರು ನೆಲೆಸಿರುವ ವ್ಯಾಪ್ತಿಯಲ್ಲಿನ ಬಿಬಿಎಂಪಿ ಕಚೇರಿಯಲ್ಲಿ ಅರ್ಜಿಗಳನ್ನು ನೀಡಲಾಗುತ್ತಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಸಹ ಸ್ವೀಕರಿಸಲಾಗುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ, ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ. ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಲು ದೊರಕುವ ಮತದಾನ ಅಮೂಲ್ಯವಾಗಿರುವ ಹಿನ್ನೆಲೆಯಲ್ಲಿ ಅದನ್ನು ಸದ್ಬಳಕೆ ಮಾಡಿಕೊಳ್ಳಲು ನಾಗರಿಕರು ಮುಂದಾಗಬೇಕು ಎಂದು ಚುನಾವಣಾ ಆಯೋಗವು ಮನವಿ ಮಾಡಿದೆ.

ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಮತ್ತು ಭಾರತರತ್ನ ಪುರಸ್ಕೃತ ವಿಜ್ಞಾನಿ ಸಿ.ಎನ್‌.ಆರ್‌.ರಾವ್‌ ಅವರು ಚುನಾವಣಾ ಐಕಾನ್‌ ಆಗಿದ್ದಾರೆ. ಮತಗಟ್ಟೆಗೆ ಸೆಳೆಯಲು ಚುನಾವಣಾ ಆಯೋಗವು ಇವರಿಬ್ಬರ ಜತೆಗೆ ಇನ್ನಷ್ಟುಗಣ್ಯರನ್ನು ಐಕಾನ್‌ ಆಗಿ ಆಯ್ಕೆ ಮಾಡಲು ಮುಂದಾಗಿದೆ. ಮತದಾನದ ಮೌಲ್ಯದ ಕುರಿತು ವಿಡಿಯೋ ಜತೆಗೆ ಭಿತ್ತಿಪತ್ರದ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ.

loader