ಬೆಂಗಳೂರು :  ರಾಜ್ಯದ ಹಿತದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಒಕ್ಕಲಿಗರ ಜಾಗೃತಿ ವೇದಿಕೆ ಒತ್ತಾಯಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಎ.ಸಿ.ಗಂಗಾಧರ, ಕಳೆದ ಆರು ದಶಕಗಳಿಂದ ದೇವೇಗೌಡ ಅವರು ರಾಜ್ಯದ ಜತೆಗೆ ದೇಶದ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಗಾಧ ರಾಜಕೀಯ ಅನುಭವ ಅವರಿಗಿದೆ. ಅಂತಹ ಹಿರಿಯ ರಾಜಕೀಯ ಮುತ್ಸದ್ಧಿಯ ಸೋಲು ದೇಶಕ್ಕೆ ದೊಡ್ಡ ನಷ್ಟ. ಹೇಮಾವತಿ, ಕಾವೇರಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಧಾನಸಭೆ, ಲೋಕಸಭೆ ಅನೇಕ ಬಾರಿ ಆಯ್ಕೆಗೊಂಡ ಅನುಭವ ಅವರಿಗಿದ್ದು, ತುಮಕೂರು ಕ್ಷೇತ್ರದ ಜನತೆ ಅವರನ್ನು ಪರಾಭವಗೊಳಿಸಿರುವುದು ನೋವು ತಂದಿದೆ ಎಂದು ಹೇಳಿದರು.

ರಾಜ್ಯ ರಾಜಕೀಯ ಇತಿಹಾಸದಲ್ಲಿ ದೆಹಲಿ ಮಟ್ಟದಲ್ಲಿ ಯಾವೊಬ್ಬ ಸಂಸದರು ಲೋಕಸಭೆಯಲ್ಲಿ ಮಾತನಾಡುವ ಆತ್ಮಸ್ಥೈರ್ಯ ಹೊಂದಿರುವುದಿಲ್ಲ. ಕಾವೇರಿ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ದನಿ ಎತ್ತಿ ಮಾತನಾಡುವ ದೇವೆಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕೆಂದು ಅವರು ಕಾಂಗ್ರೆಸ್‌ ವರಿಷ್ಠರಿಗೆ ಮನವಿ ಮಾಡಿದ್ದಾರೆ.