ಫೋಟೋ ಕೃಪೆ: ಹಿಂದೂಸ್ಥಾನ್ ಟೈಮ್ಸ್

ಕಾಲು(ಜು.18): ‘ಜೀವನದಲ್ಲಿ ಏನಾದರೂ ಮಾಡು, ಆದರೆ ಪೊಲೀಸ್ ಠಾಣೆ ಮೆಟ್ಟಿಲನ್ನು ಮಾತ್ರ ಹತ್ತಬೇಡ...’ಇದು ಪ್ರತಿಯೊಬ್ಬ ಭಾರತೀಯ ತಂದೆ ತನ್ನ ಮಕ್ಕಳಿಗೆ ಹೇಳುವ ಬುದ್ಧಿಮಾತು.

ಪೊಲೀಸ್ ಠಾಣೆ ಮೆಟ್ಟಿಲೇರುವಂತ ಕೆಲಸ ಮಾಡಬೇಡ ಎಂಬ ಕಿವಿಮಾತಿನ ಜೊತೆಗೆ, ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಅಲ್ಲಾಗುವ ಕಹಿ ಅನುಭವ ನಿನಗಾಗುವುದು ಬೇಡ ಎಂಬ ಬಯಕೆ ಕೂಡ ಈ ಮಾತಿನ ಹಿಂದಿದೆ.

ಪೊಲೀಸರೆಂದರೆ ಸಾರ್ವಜನಿಕರೊಂದಿಗೆ ಒರಟಾಗಿ ವರ್ತಿಸುವ, ಜೋರು ಧ್ವನಿಯಲ್ಲಿ ಹೆದರಿಸುವ ಪರಿಯೇ ನಮ್ಮ ಕಣ್ಮುಂದೆ ಬರುತ್ತದೆ. ಕಾನೂನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸರಿಗೆ ಕೆಲವೊಮ್ಮೆ ಇಂತಹ ಒರಟು ವತರ್ನೆ ಅನಿವಾರ್ಯವೂ ಹೌದು.

ಆದರೆ ಇಲ್ಲೊಂದು ಪೊಲೀಸ್ ಠಾಣೆಯಿದೆ. ಈ ಠಾಣೆಗೆ ನೀವು ಭೇಟಿ ನೀಡಿದರೆ ಇಂತಹ ಯಾವುದೇ ಕಹಿ ಅನುಭವ ನಿಮಗಾಗುವುದಿಲ್ಲ. ಬದಲಿಗೆ ಪೊಲೀಸರ ವಿಶೇಷ ಆತಿಥ್ಯದ ಅನುಭವ ನಿಮಗಾಗಲಿದೆ.

ಹೌದು, ರಾಜಸ್ಥಾನದ ಬಿಕನೇರ್ ಜಿಲ್ಲೆಯ ಕಾಲುವಿನಲ್ಲಿರುವ ಪೊಲೀಸ್ ಠಾಣೆ, ಇಡೀ ದೇಶದಲ್ಲೇ ವಿಶಿಷ್ಟವಾದ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಠಾಣೆಗೆ ಭೇಟಿ ನೀಡುವ ಎಲ್ಲರಿಗೂ ಮೊದಲು ತಂಪು ನೀರು, ಚಹ, ನಿಂಬೂಪಾನಿ ನೀಡಿ ಸ್ವಾಗತಿಸಲಾಗುತ್ತದೆ. ದೂರದ ಊರಿನಿಂದ ಬಂದವರಿಗಾಗಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಅಷ್ಟೇ ಅಲ್ಲ ಠಾಣೆಯಲ್ಲಿ ಏರ್ ಕೂಲರ್ ವ್ಯವಸ್ಥೆ ಇದ್ದು, ಕೈದಿಗಳಿಗೂ ಇದನ್ನು ಬಳಸಲು ಅವಕಾಶ ನೀಡಲಾಗಿದೆ. ಜೊತೆಗೆ ಪ್ರತಿ ಲಾಕಪ್’ಗೂ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇದೆ.

2012ರಲ್ಲಿ ಸ್ಥಾಪಿಸಲಾದ ಕಾಲು ಪೊಲೀಸ್ ಠಾಣೆ ತನ್ನ ವಿಶೇಷತೆಯಿಂದಲೇ ಇಡೀ ದೇಶದ ಗಮನ ಸೆಳೆದಿದೆ.

ಕಾಲು ಪೊಲೀಸ್ ಠಾಣೆಯಲ್ಲಿ FIR ದಾಖಲಿಸುವ ಪ್ರಮಾಣದಲ್ಲೂ ವರ್ಷದಿಂದ ವರ್ಷಕ್ಕೆ ಗಮನಾರ್ಹ ಇಳಿಕೆ ಕಂಡು ಬರುತ್ತಿದೆ. 2014ರಲ್ಲಿ 74 FIRಗಳು ದಾಖಲಾಗಿದ್ದರೆ, ಈ ವರ್ಷ ಕೇವಲ 37 FIR ಅರ್ಜಿ ದಾಖಲಾಗಿವೆ. ಅಷ್ಟೇ ಅಲ್ಲ ಈ ಠಾಣೆಯ ಅಧಿಕಾರ ವ್ಯಾಪ್ತಿಯಲ್ಲಿ ಅಪರಾಧ ಪ್ರಮಾಣವೂ ಇಳಿಕೆ ಕಂಡಿದೆ.

ಇದುವರಗೂ ಕೇವಲ 4 ಪ್ರಕರಣಗಳನ್ನಷ್ಟೇ ಈ ಠಾಣೆ ಬೇಧಿಸಿಲ್ಲ ಎಂಬುದು ವಿಶೇಷ. ಒಟ್ಟು 5 ಠಾಣಾಧಿಕಾರಿಗಳು ಇಲ್ಲಿ ಸೇವೆ ಸಲ್ಲಿಸಿದ್ದು, ಪ್ರತಿಯೊಬ್ಬರೂ ಈ ಠಾಣೆ ಪ್ರಸಿದ್ಧಿ ಪಡೆಯಲು ಕಾರಣೀಭೂತರಾಗಿದ್ದಾರೆ ಅಂತಾರೆ ಬಿಕನೇರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಮೋಹನ್ ಶರ್ಮಾ.