ರಾಜ್ಯದ ಸಮಗ್ರ ಅಭಿವೃದ್ಧಿಯ ನೀಲನಕ್ಷೆಯಾದ ರಾಜ್ಯ ಸರ್ಕಾರದ ‘ನವ ಕರ್ನಾಟಕ ವಿಷನ್ 2025’ ವರದಿ ಜನವರಿ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದು ರಾಜ್ಯ ಭವಿಷ್ಯದಲ್ಲಿ ಹೇಗಿರಬೇಕು ಎಂಬ ಬಗ್ಗೆ ರಾಜ್ಯದ ಶ್ರೀಸಾಮಾನ್ಯರು, ತಜ್ಞರು ಹಾಗೂ ಬುದ್ಧಿಜೀವಿಗಳು ನೀಡಿದ ಸಲಹೆಗಳು ಹಾಗೂ ಅವರ ಆಶೋತ್ತರಗಳನ್ನು ಒಳಗೊಂಡಿರುತ್ತದೆ.

ಬೆಂಗಳೂರು: ರಾಜ್ಯದ ಸಮಗ್ರ ಅಭಿವೃದ್ಧಿಯ ನೀಲನಕ್ಷೆಯಾದ ರಾಜ್ಯ ಸರ್ಕಾರದ ‘ನವ ಕರ್ನಾಟಕ ವಿಷನ್ 2025’ ವರದಿ ಜನವರಿ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದು ರಾಜ್ಯ ಭವಿಷ್ಯದಲ್ಲಿ ಹೇಗಿರಬೇಕು ಎಂಬ ಬಗ್ಗೆ ರಾಜ್ಯದ ಶ್ರೀಸಾಮಾನ್ಯರು, ತಜ್ಞರು ಹಾಗೂ ಬುದ್ಧಿಜೀವಿಗಳು ನೀಡಿದ ಸಲಹೆಗಳು ಹಾಗೂ ಅವರ ಆಶೋತ್ತರಗಳನ್ನು ಒಳಗೊಂಡಿರುತ್ತದೆ.

ಹೀಗಾಗಿ, ರಾಜಕೀಯ ಪಕ್ಷಗಳು ಇದನ್ನು ಬಳಸಿಕೊಳ್ಳಬಹುದು. ಬೇಕಿದ್ದರೆ, ಮುಂದಿನ ಚುನಾವಣಾ ಪ್ರಣಾಳಿಕೆಯನ್ನು ಇದರ ಆಧಾರದ ಮೇಲೆ ರೂಪಿಸಿಕೊಳ್ಳಬಹುದು. ಹೀಗಂತ ನವ ಕರ್ನಾಟಕ ಮಿಷನ್ 2025 ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಚಿದಂಬರಂ ತಿಳಿಸಿದ್ದಾರೆ.

ಅಭಿವೃದ್ಧಿ ವಿಷಯದಲ್ಲಿ ರಾಜ್ಯ 2025ರ ವೇಳೆಗೆ ಯಾವ ಹಂತ ಮುಟ್ಟಿರಬೇಕು ಎಂಬ ದೂರದೃಷ್ಟಿಯಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಈ ನವ ಕರ್ನಾಟಕ ಮಿಷನ್ 2025 ವರದಿ ಸಿದ್ಧಪಡಿಸಲು ಮುಂದಾಗಿದೆ.

ಈ ವರದಿ ಡಿಸೆಂಬರ್ ವೇಳೆಗೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನಂತರ ಅದರ ಅನುಷ್ಠಾನವನ್ನು 2015ರ ವರೆಗೂ ಅಧಿಕಾರ ನಡೆಸುವ ಸರ್ಕಾರಗಳೇ ಮಾಡಬೇಕಾಗುತ್ತದೆ. ಹಾಗೆಯೇ ಅಗತ್ಯ ಅನುದಾನ ಮತ್ತು ಯಶಸ್ವಿ ಅನುಷ್ಠಾನಕ್ಕೆ ಸೂಕ್ತ ಜಾಲ ರೂಪಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಿಸೆಂಬರ್ ವೇಳೆಗೆ ನವ ಕರ್ನಾಟಕ ವಿಷನ್‌ನ ಸಮಗ್ರ ವರದಿ ಸಿದ್ಧವಾಗಲಿದ್ದು, ತಕ್ಷಣವೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಆನಂತರ ಇದು ಸಾರ್ವಜನಿಕ ದಾಖಲೆಯಾಗಲಿದ್ದು, ಇದನ್ನು ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಯಾರಾದರೂ ಬಳಸಿಕೊಳ್ಳಬಹುದು. ಬೇಕಾದರೆ ನವ ಕರ್ನಾಟಕ ವಿಷನ್ ದಾಖಲೆಯಲ್ಲಿರುವ ಶಿಫಾರಸುಗಳನ್ನೇ ಚುನಾವಣಾ ಪ್ರಣಾಳಿಕೆಯಲ್ಲಿಯೂ ಅಳವಡಿಸಿಕೊಳ್ಳಬಹುದು ಎಂದು ಅವರು ಪ್ರತಿಕ್ರಿಯಿಸಿದರು.

ಅಭಿವೃದ್ಧಿಗೆ ದಾರಿ ದೀಪವಾಗಲಿರುವ ಈ ದಾಖಲೆ ರೂಪಿಸಲು ನಮ್ಮ ಇಲಾಖೆ ಈಗಾಗಲೇ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಸಮಾಜದ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲಿದೆ ಎಂದು ಅವರು ಹೇಳಿದರು.