ಬೆಂಗಳೂರು [ಜೂ.17] :   ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ನೀಡಿರುವ ರಾಜೀನಾಮೆಯನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. 

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಯಾರೂ ರಾಜ್ಯಾಧ್ಯಕ್ಷರಾಗುವುದಿಲ್ಲ. ವಿಶ್ವನಾಥ್ ಅವರೇ  ಮುಂದುವರಿ ಯುತ್ತಾರೆ ಎಂದು ಸ್ಪಷ್ಟಪಡಿಸಿದರು. ವಿಶ್ವನಾಥ್ ಅವರ ಮನಸ್ಸಿಗೆ ಬೇಸರ ಆಗಿರುವುದು ನಿಜ. ಮೈಸೂರು ಜಿಲ್ಲೆಯೊಳಗಿನ ಕೆಲವು ಕಾರ್ಯಗಳಲ್ಲಿ ಆದ ಸಮಸ್ಯೆ ಇದಕ್ಕೆ ಕಾರಣ. ಇಬ್ಬರು ಸಚಿವರು ಇದ್ದಾರೆ. ಅವರು ಪರಸ್ಪರ ಚರ್ಚೆ ಮಾಡುತ್ತಾರೆ. ನಾನು ಅವರೊಂದಿಗೆ ಶನಿವಾರ ರಾತ್ರಿ ಕೂಡ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸರ್ಕಾರದ ಮಿತ್ರ ಪಕ್ಷಗಳ ಸಮನ್ವಯ ಸಮಿತಿಗೆ ಅಧ್ಯಕ್ಷರು ಸೇರ್ಪಡೆಯಾದರೆ ಮಾತ್ರ ಅಧಿಕಾರವಲ್ಲ. ನಾನೇನಾದರೂ ಸಮನ್ವಯ ಸಮಿತಿಯಲ್ಲಿ ಇದ್ದೇನೆಯೇ ಎಂದರು. ತಮ್ಮ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂಬ ಬೇಡಿಕೆ ಯನ್ನು ಉಪ್ಪಾರ ಸಮಾಜದ ಮುಖಂಡರು ಇಟ್ಟಿದ್ದಾರೆ. ಈ ಸಂಬಂಧ ನಾನು ಕೂಡಲೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.