ವಿಧಾನಸಭಾ ಚುನಾವಣೆಗೆ ರಾಜ್ಯದ 224 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿರುವ ಜೆಡಿಎಸ್ ಪ್ರಣಾಳಿಕೆ ಸಿದ್ಧಪಡಿಸುವ ಹೊಣೆಯನ್ನು ಮುಖಂಡರಾದ ಎಚ್.ವಿಶ್ವನಾಥ್, ಡಾ.ಸುಬ್ರಮಣ್ಯ ಮತ್ತು ಶೀಕಂಠೇಗೌಡ ಹೆಗಲಿಗೆ ವಹಿಸಿದೆ.

ಬೆಂಗಳೂರು (ಡಿ.15): ವಿಧಾನಸಭಾ ಚುನಾವಣೆಗೆ ರಾಜ್ಯದ 224 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿರುವ ಜೆಡಿಎಸ್ ಪ್ರಣಾಳಿಕೆ ಸಿದ್ಧಪಡಿಸುವ ಹೊಣೆಯನ್ನು ಮುಖಂಡರಾದ ಎಚ್.ವಿಶ್ವನಾಥ್, ಡಾ.ಸುಬ್ರಮಣ್ಯ ಮತ್ತು ಶೀಕಂಠೇಗೌಡ ಹೆಗಲಿಗೆ ವಹಿಸಲಾಗಿದೆ.

ದೇವೇಗೌಡ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾತ್ರಿ ನಗರದ ಖಾಸಗಿ ಹೊಟೇಲ್’ನಲ್ಲಿ ನಡೆದ ಜೆಡಿಎಸ್ ಕೋರ್ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಚುನಾವಣೆ ಎದುರಿಸಲು ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಎಚ್.ವಿಶ್ವನಾಥ್, ಡಾ.ಸುಬ್ರಮಣ್ಯ ಮತ್ತು ಶೀಕಂಠೇಗೌಡ ಅವರಿಗೆ ನೀಡಲಾಗಿದೆ.

ಸಭೆಯಲ್ಲಿ ವಿಶ್ವನಾಥ್ ಅವರಿಗೆ ಪ್ರಣಾಳಿಕೆ ಸಿದ್ಧಪಡಿಸುವಂತೆ ಪಕ್ಷದ ನಾಯಕರು ಮನವಿ ಮಾಡಿದರು. ಪಕ್ಷದ ನಾಯಕರ ಒಕ್ಕೊರಲ ಅಭಿಪ್ರಾಯ ಹಿನ್ನೆಲೆಯಲ್ಲಿ ಮೂವರಿಗೆ ಜವಾಬ್ದಾರಿಯನ್ನು ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ರಾಜ್ಯದ 224 ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಅಭ್ಯರ್ಥಿಗಳ ಗೆಲುವಿಗೆ ಅಗತ್ಯ ಇರುವ ತಂತ್ರಗಾರಿಕೆಯನ್ನು ಪಕ್ಷದ ಎಲ್ಲಾ ನಾಯಕರು ಒಗ್ಗೂಡಿ ರೂಪಿಸುವ ಬಗ್ಗೆ ಚರ್ಚಿಸಲಾಗಿದೆ. ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾಯಕರು ಕೆಲಸ ಮಾಡಬೇಕು ಎಂದು ವರಿಷ್ಠರು ಸೂಚಿಸಿದರು ಎನ್ನಲಾಗಿದೆ.