23ರಂದು ವಿಶ್ವ ಲಿಂಗಾಯತ್ ಪರಿಷತ್

First Published 14, Jan 2018, 7:55 AM IST
Vishwa Lingayatha Prishath
Highlights

ಪ್ರತ್ಯೇಕ ಧರ್ಮ ರಚನೆಗಾಗಿ ಸಂಘರ್ಷಕ್ಕೆ ಇಳಿದಿದ್ದ ವೀರಶೈವ ಮತ್ತು ಲಿಂಗಾಯತ ಬಣಗಳು ಕೊನೆಗೂ ಅಧಿಕೃತವಾಗಿ ಇಬ್ಭಾಗವಾಗಲು ನಿರ್ಧರಿಸಿದ್ದು, ಲಿಂಗಾಯತ ಸ್ವತಂತ್ರ ಹೋರಾಟ ಸಮಿತಿಯು ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ವಿಶ್ವ ಲಿಂಗಾಯತ ಪರಿಷತ್ ರಚನೆಗೆ ನಿರ್ಧರಿಸಿದೆ. ನೂತನ ವಿಶ್ವ ಲಿಂಗಾಯತ ಪರಿಷತ್ ಜನವರಿ 23ರಂದು ಅಸ್ತಿತ್ವಕ್ಕೆ ಬರಲಿದೆ.

ಬೆಂಗಳೂರು (ಜ.14): ಪ್ರತ್ಯೇಕ ಧರ್ಮ ರಚನೆಗಾಗಿ ಸಂಘರ್ಷಕ್ಕೆ ಇಳಿದಿದ್ದ ವೀರಶೈವ ಮತ್ತು ಲಿಂಗಾಯತ ಬಣಗಳು ಕೊನೆಗೂ ಅಧಿಕೃತವಾಗಿ ಇಬ್ಭಾಗವಾಗಲು ನಿರ್ಧರಿಸಿದ್ದು, ಲಿಂಗಾಯತ ಸ್ವತಂತ್ರ ಹೋರಾಟ ಸಮಿತಿಯು ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ವಿಶ್ವ ಲಿಂಗಾಯತ ಪರಿಷತ್ ರಚನೆಗೆ ನಿರ್ಧರಿಸಿದೆ. ನೂತನ ವಿಶ್ವ ಲಿಂಗಾಯತ ಪರಿಷತ್ ಜನವರಿ 23ರಂದು ಅಸ್ತಿತ್ವಕ್ಕೆ ಬರಲಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಲಿಂಗಾಯತ ಸ್ವತಂತ್ರ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಾ.ಶಿವಾನಂದ ಜಾಮದಾರ್, 8 ತಿಂಗಳಿಂದ ಲಿಂಗಾಯತ ಧರ್ಮ ರಚನೆಗಾಗಿ ವೀರಶೈವ ಮಹಾಸಭಾ ಜತೆಗೂಡಿ ಹೋರಾಟ ನಡೆಸಲು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಿತಿಯ ಯತ್ನ ವಿಫಲವಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ವಿಶ್ವ ಲಿಂಗಾಯತ ಪರಿಷತ್ ಸ್ಥಾಪನೆಯ ನಿರ್ಧಾರವನ್ನು ಅತ್ಯಂತ ವಿಷಾದದಿಂದ ಕೈಗೊಂಡಿದ್ದೇವೆ.

ನೂತನ ವಿಶ್ವ ಲಿಂಗಾಯತ ಪರಿಷತ್ ಈಗಾಗಲೇ ಅಸ್ತಿತ್ವದಲ್ಲಿರುವ ವೀರಶೈವ ಮಹಾಸಭಾಕ್ಕಿಂತ ಭಿನ್ನ ಹಾಗೂ ವಿಶಾಲ ಉದ್ದೇಶವನ್ನು ಹೊಂದಿದೆ ಎಂದು ವಿವರಿಸಿದರು. ವಿಶ್ವ ಲಿಂಗಾಯತ ಪರಿಷತ್ ಜ.23ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಆ ದಿನ ಪರಿಷತ್‌ನ ಕರಡು ಪತ್ರ (ಬೈಲಾ) ಅಂತಿಮಗೊಳಿಸಿ, ಅದೇ ವೇಳೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಈಗಾಗಲೇ ಸ್ಥಾಪಿಸಲಾಗಿರುವ ರಾಷ್ಟ್ರೀಯ ಬಸವ ಸೇನೆಯು ಲಿಂಗಾಯತ ಪರಿಷತ್‌ನ ಯುವ ಘಟಕವಾಗಿ ವಿಲೀನವಾಗಲಿದೆ ಎಂದು ತಿಳಿಸಿದರು.

ಜೊತೆಗೆ ಮಹಿಳೆಯರನ್ನೊಳಗೊಂಡ ವಿಶೇಷ ಕೋಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಕೇರಳದಲ್ಲಿರುವ ಎಂಜಿನಿಯರ್, ವೈದ್ಯರು, ವಿಜ್ಞಾನಿಗಳು, ತತ್ವಜ್ಞಾನಿಗಳು ಮತ್ತಿತರ ವೃತ್ತಿನಿರತರನ್ನು ಒಳಗೊಂಡ ವೃತ್ತಿಪರರ ಕೋಶ, ಅಮೇರಿಕ, ದುಬೈ ಸೇರಿದಂತೆ ವಿದೇಶಗಳಲ್ಲಿರುವ ಲಿಂಗಾಯತರನ್ನು ಒಳಗೊಂಡ ಅನಿವಾಸಿ ಭಾರತೀಯರ ಕೋಶಗಳನ್ನು ಕೂಡ ರಚಿಸಲಾಗುತ್ತಿದೆ.

ಈ ಎಲ್ಲ ಕೋಶಗಳು ವಿಶ್ವ ಲಿಂಗಾಯತ ಪರಿಷತ್‌ನ ಭಾಗವಾಗಲಿವೆ. ವಿಶ್ವದಾದ್ಯಂತ ಇರುವ ಲಿಂಗಾಯತರನ್ನು ಸದಸ್ಯರನ್ನಾಗಿಸಿಕೊಂಡು ಸ್ವತಂತ್ರ ಲಿಂಗಾಯತ ಧರ್ಮ ಆಗುವ ತನಕ ಹೋರಾಟ ನಡೆಸಲಾಗುವುದು ಹಾಗೂ ಸಮಾಜದ ಎಲ್ಲ ಉಪಪಂಗಡಗಳ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಮನಸ್ಸಿರಲಿಲ್ಲ: ವೀರಶೈವ ಮಹಾಸಭಾದಿಂದ ಹೊರಬರುವ ಮನಸ್ಸು ನಮಗೂ ಇರಲಿಲ್ಲ. ಆದರೆ ಮಹಾಸಭಾ ತನ್ನ ಹಳೆಯ ಸಂಕುಚಿತ ಮನಸ್ಥಿತಿಯಿಂದ ಹೊರಬಾರದೇ ಇರುವ ಹಿನ್ನೆಲೆಯಲ್ಲಿ ಲಿಂಗಾಯತ ಸಮಾಜದ ಏಳ್ಗೆಯ ದೃಷ್ಟಿಯಿಂದ ಹೊಸ ಮಾತೃಸಂಸ್ಥೆ ಹುಟ್ಟು ಹಾಕಬೇಕಾಗಿದೆ. ಸಮಿತಿಯ ಮೇಲೆ ಸಾಕಷ್ಟು ಒತ್ತಡಗಳಿದ್ದರೂ ಸಮಾಜದ ಹಿತದೃಷ್ಟಿಯಿಂದ ವಿಶ್ವ  ಅಭೂತಪೂರ್ವ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಮಾರು 113 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ವೀರಶೈವ ಮಹಾಸಭಾದ ಉದ್ದೇಶ ಸಮಾಜದ ಏಳ್ಗೆಯೇ ಆಗಿತ್ತು. ಆದರೆ ಕಾಲಕ್ರಮೇಣ ಕೆಲಶಕ್ತಿಗಳ ಹಿಡಿತಕ್ಕೆ ಸಿಲುಕಿ, ಸಮಾಜದ ಎಲ್ಲ ಒಳಪಂಗಡಗಳ ಪ್ರಗತಿ ಸಾಧ್ಯವಾಗಲಿಲ್ಲ. ಈವರೆಗೆ ಮಹಾಸಭಾ ಎಷ್ಟು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದೆ ಎಂದು ತಿರುಗು ನೋಡಿದರೆ ಉತ್ತರ ಸಿಗುವುದಿಲ್ಲ. ಸ್ವತಂತ್ರ ಲಿಂಗಾಯತ ಹೋರಾಟದ ವಿಚಾರದಲ್ಲೂ ಮಹಾಸಭಾ ತಳೆದಿರುವ ನಿಲುವು ಅತ್ಯಂತ ನಿರಾಶದಾ ಯಕವಾಗಿದೆ.

ಹೀಗಾಗಿ ಲಿಂಗಾಯತರ ಉಳಿವಿಗಾಗಿ ಒಂದು ಪ್ರಾತಿನಿಧಿಕ ಸಂಸ್ಥೆಯ ಅಗತ್ಯವಿದೆ ಎಂಬುದನ್ನು ಸಮಾಜ ಬಾಂಧವರು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ವಿಶ್ವ ಲಿಂಗಾಯತ ಪರಿಷತ್ ಅಸ್ಸಿತ್ವಕ್ಕೆ ಬರುತ್ತಿದೆ ಎಂದು ಸಮರ್ಥಿಸಿಕೊಂಡರು. ಹೋರಾಟ ಸಮಿತಿ ಸಂಚಾಲಕ ಡಾ.ಜಯಣ್ಣ ಮಾತನಾಡಿ, ವೀರಶೈವ ಮಹಾಸಭಾಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಇತ್ತೀಚೆಗೆ ಧರ್ಮಸ್ಥಾಪನೆಗಾಗಿ ಕುಸ್ತಿ ನಡೆಯುತ್ತಿದೆ, ನಾನೂ ನೋಡುತ್ತಿದ್ದೇನೆ ಎಂದ ಬಾಲಿಶ ಹೇಳಿಕೆ ನೀಡಿದ್ದಾರೆ. ಮನೆಯ ಹಿರಿಯರಾಗಿ ಅವರು ಕುಸ್ತಿ ನಡೆಯುವುದನ್ನು ನೋಡುತ್ತ ಕುಳಿತಿದ್ದಾರೆ ಎಂದರೆ ಅವರ ಮನಸಿನಲ್ಲಿ ಏನಿದೆ ಎಂಬುದು ಸ್ಪಷ್ಟವಾಗುತ್ತದೆ. ಹಿರಿಯ ಮಾತು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆ ಹೊರತು ಕಲಹ ತಂದಿಡುವುದಲ್ಲ ಎಂದು ವಾಗ್ದಾಳಿ ನಡೆಸಿದರು.

loader