ನವದೆಹಲಿ(ಡಿ.12): ಪಂಚ ರಾಜ್ಯಗಳ ವಿಧಾನಸಭಾ ಫಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿ ಪಾಳೆಯದಲ್ಲಿ ದು:ಖದ ವಾತಾವರಣ ಇದೆ. ಅದರಲ್ಲೂ ಹಿಂದಿ ಹಾರ್ಟ್ ಲ್ಯಾಂಡ್ ನಲ್ಲೇ ಸೋಲು ಕಂಡಿರುವುದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ.

ಈ ಮಧ್ಯೆ ಜನಪ್ರಿಯ ರಾಷ್ಟ್ರೀಯ ಸುದ್ದಿವಾಹಿನಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅವಶ್ಯಕತೆ ಇಲ್ಲ ಎಂದು ಅರ್ನಬ್ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ.

ಪ್ರಧಾನಿ ಮೋದಿ ಜನಪ್ರಿಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶಕ್ಕೆ ಇನ್ನು ಮುಂದೆ ಮೋದಿ ಅವಶ್ಯಕತೆ ಇಲ್ಲ ಎಂಬರ್ಥದಲ್ಲಿ ಅರ್ನಬ್ ಪತ್ರ ಬರೆದಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಅರ್ನಬ್ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಫೇಸ್ ಬುಕ್ ನಲ್ಲಿ ಶೇರ್ ಕೂಡ ಮಾಡಲಾಗಿತ್ತು.

 

ಆದರೆ ಅಸಲಿಗೆ ಈ ಪತ್ರ 2015ರಲ್ಲೇ ಬರೆಯಲಾಗಿತ್ತು ಎಂಬುದು ಇದೀಗ ಸಾಬೀತಾಗಿದ್ದು, ರಿಪಬ್ಲಿಕ್ ಟಿವಿ 2017ರಲ್ಲಿ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಸುಳ್ಳು ಸುದ್ದಿ ಎಂದು ಖುದ್ದು ಅರ್ನಬ್ ಗೋಸ್ವಾಮಿ ಸ್ಪಷ್ಟಪಡಿಸಿದ್ದಾರೆ.
 

ಅಷ್ಟಕ್ಕೂ ಈ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿಸ್ವಾರ್ಥ ಸೇವೆ, ದೇಶಕ್ಕಾಗಿ ಅವಿರತ ದುಡಿಯುವ ಅವರ ಕಾರ್ಯಕ್ಷಮತೆಯನ್ನು ಕೊಂಡಾಡಲಾಗಿದೆ.