ಇತ್ತೀಚೆಗೆ ಅಸ್ಸಾಂನಲ್ಲಿ ನಿರ್ಮಿಸಲಾದ ಭಾರತದ ಅತಿ ಉದ್ದನೆಯ ರೈಲು-ರಸ್ತೆ ಸೇತುವೆ ಎಂಬ ಖ್ಯಾತಿಯ ಬೋಗಿಬೀಲ್‌ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಆದರೆ ಉದ್ಘಾಟನೆ ಬಳಿಕ ನರೇಂದ್ರ ಮೋದಿ ಜನರೇ ಇರದ ರೈಲಿನೆಡೆಗೆ ಕೈ ಮಾಡುತ್ತಾ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮೊದಲಿಗೆ ‘ಫೇಕು ಎಕ್ಸ್‌ಪ್ರೆಸ್‌’ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ನೂತನವಾಗಿ ನಿರ್ಮಾಣವಾದ ಸೇತುವೆ ಮೇಲೆ ನಿಂತು ನರೇಂದ್ರ ಮೋದಿ ಜನರೆಡೆಗೆ ಕೈಮಾಡುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿ ಕ್ಯಾಮೆರಾಗೇ ಪೋಸ್‌ ಕೊಡಲು ನರೇಂದ್ರ ಮೋದಿ ಖಾಲಿ ರೈಲಿನೆಡೆಗೆ ಕೈಮಾಡುತ್ತಿದ್ದಾರೆ ಎಂದು ಬರೆದು ಒಕ್ಕಣೆ ಬರೆದಿತ್ತು. ಅನಂತರದಲ್ಲಿ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಖಾಲಿ ರೈಲಿನೆಡೆಗೆ ಕೈಬೀಸಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ದೃಢವಾಗಿದೆ.

ಏಕೆಂದರೆ ಸೇತುವೆ ಉದ್ಘಾಟನೆಯ ನೇರಪ್ರಸಾರದ ವಿಡಿಯೋಗಳನ್ನು ಗಮನಿಸಿದಾಗ ರೈಲಿನ ತುಂಬಾ ಜನರಿರುವುದು ತಿಳಿಯುತ್ತದೆ. 9:12 ನಿಮಿಷ ಇರುವ ಮೂಲ ವಿಡಿಯೋದಲ್ಲಿ ರೈಲು ಜನರಿಂದ ಭರ್ತಿಯಾಗಿರುವುದು ಕಾಣುತ್ತದೆ. ಜೊತೆಗೆ ‘ಪಿಐಬಿ ಇಂಡಿಯಾ’ ಮೋದಿ ಹಸಿರು ನಿಶಾನೆ ತೋರಿ ಉದ್ಘಾಟನೆ ಮಾಡಿರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ರೈಲಿನಲ್ಲಿ ಜನರಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.