ನವದೆಹಲಿ[ಮಾ.16]: ಹಿಜಾಬ್‌ ಧರಿಸಿರುವ ಮುಸ್ಲಿಂ ಹುಡುಗಿಯೊಬ್ಬಳು ಮೋದಿಗೆ ಮತ ನೀಡಿ ಎಂದು ಪ್ರಕಟಣಾ ಪತ್ರ ಹಿಡಿದಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆಕೆ ಹಿಡಿದಿರುವ ಪ್ರಕಟಣೆಯಲ್ಲಿ, ‘ಮೋದಿ ತಮ್ಮ ಜೇಬು ತುಂಬಿಸಿಕೊಳ್ಳುವ ಉದ್ದೇಶದಿಂದ ರಾಜಕೀಯಕ್ಕೆ ಇಳಿದಿದ್ದರೆ, 13 ವರ್ಷ ಗುಜರಾತ್‌ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೇ ಅದನ್ನು ಸಾಧಿಸಬಹುದಿತ್ತು. ಆದರೆ ಅವರು ತಮ್ಮ ಸ್ಥಾನಕ್ಕಿಂತ ಹೆಚ್ಚಾಗಿ ದೇಶವನ್ನು ಪ್ರೀತಿಸುತ್ತಾರೆ’ ಎಂದಿದೆ. ಎಲ್ವಿಸ್‌ ಬಾಬು ಎಂಬುವವರ ಫೇಸ್‌ಬುಕ್‌ನಲ್ಲಿ ಇದನ್ನು ಪೋಸ್ಟ್‌ ಮಾಡಲಾಗಿದ್ದು 5000 ಬಾರಿ ಶೇರ್‌ ಆಗಿದೆ.

ಆದರೆ ನಿಜಕ್ಕೂ ಮುಸ್ಲಿಂ ಮಹಿಳೆ ಮೋದಿ ಪರವಾಗಿ ಪ್ರಕಟಣಾ ಪತ್ರ ಹಿಡಿದು ನಿಂತಿದ್ದಳೇ ಎಂದು ಪರಿಶೀಲಿಸಿದಾಗ ಇದು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವ ಚಿತ್ರ ಎಂದು ತಿಳಿದುಬಂದಿದೆ.

ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಮೂಲ ಚಿತ್ರ ಪತ್ತೆಯಾಗಿದ್ದು, ಅದರಲ್ಲಿ, ‘ನಾನು ಮುಸ್ಲಿಂ ಆದರೆ ನಾನು ಅರಬ್ಬಳಲ್ಲ’ ಎಂದು ಬರೆದಿದೆ. ಅಮೆರಿಕದಲ್ಲಿನ ಪೂರ್ವಾಗ್ರಹಪೀಡಿತ ನಿರ್ಣಯದ ವಿರುದ್ಧವಾಗಿ ನಡೆದ ಆಂದೋಲನವೊಂದರ ಫೋಟೋ ಅದು.