ಓಂ ಎಂದು ಪಠಿಸಿದಾಕ್ಷಣ ಕಾರಂಜಿಯಿಂದ ನೀರು ಸ್ವಾಭಾವಿಕವಾಗಿ ಚಿಮ್ಮುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹ ಅದ್ಭುತ ಶಕ್ತಿ ಹೊಂದಿರುವ ಕಾರಂಜಿಯು ಥಾಯ್ಲೆಂಡ್‌ನಲ್ಲಿದೆ ಎಂದೂ ಸುದ್ದಿ ಹಬ್ಬಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ, ಪುಟ್ಟಬಾಲಕಿಯೊಬ್ಬಳು ಮೈಕ್‌ ಹಿಡಿದು ಏನನ್ನೋ ಪಠಿಸುತ್ತಾಳೆ. ಕೆಲವೇ ಕ್ಷಣಗಳಲ್ಲಿ ಪ್ರಪಾತದಿಂದ ನೀರು ಗಗನದೆತ್ತರಕ್ಕೆ ಚಿಮ್ಮುತ್ತದೆ. ಈ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ಥಾಯ್ಲೆಂಡ್‌ನ ಸಣ್ಣ ನದಿಯಿಂದ ಸೃಷ್ಟಿಯಾಗಿರುವ ನೈಸರ್ಗಿಕ ಕಾರಂಜಿಯು ಜಗತ್ತಿನ ಗಮನ ಸೆಳೆಯುತ್ತಿದೆ.

ಪರ್ವತದ ತಪ್ಪಲಿನಲ್ಲಿ ಹರಿಯುವ ತೊರೆಯ ಮೇಲ್ಭಾಗದಲ್ಲಿ ನಿಂತು ‘ಓಂ’ ಎಂದು ಪಠಿಸಿದರೆ ಪರ್ವತಕ್ಕಿಂತ ದುಪ್ಪಟ್ಟು ಎತ್ತರಕ್ಕೆ ನೀರು ಚಿಮ್ಮುತ್ತದೆ. ಇಲ್ಲಿ ಏನಾಗುತ್ತಿದೆ ನಿಜಕ್ಕೂ ಗೊತ್ತಿಲ್ಲ. ಅಷ್ಟೊಂದು ಎತ್ತರಕ್ಕೆ ನೀರು ಸ್ವಾಭಾವಿಕವಾಗಿ ಚಿಮ್ಮುವುದಾದರೂ ಹೇಗೆ? ದೈವಜ್ಞರೇ ಇದಕ್ಕೆ ಉತ್ತರ ಕಂಡುಕೊಳ್ಳಬೇಕು’ ಎಂದು ಬರೆದು ಶೇರ್‌ ಮಾಡಲಾಗುತ್ತಿದೆ.

ಆದರೆ ನಿಜಕ್ಕೂ ಓಂ ಎಂದು ಪಠಿಸಿದರೆ ನೀರು ಚಿಮ್ಮುತ್ತದೆಯೇ ಎಂದು ಪರಿಶೀಲಿಸಿದಾಗ ಇದರ ಅಸಲಿಯತ್ತು ತಿಳಿಯುತ್ತದೆ. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿಡಿಯೋದಲ್ಲಿರುವ ಬಾಲಕಿ ‘ಓಂ’ ಎಂದು ಪಠಿಸುವುದಿಲ್ಲ. ಬದಲಾಗಿ ‘ಆ..’ ಎಂದು ಪಠಿಸುತ್ತಿದ್ದಾಳೆ ಎಂಬುದು ಸ್ಪಷ್ಟವಾಗುತ್ತದೆ. ವಾಸ್ತವವಾಗಿ ಕಾರಂಜಿಯಿಂದ ಮ್ಯಾಜಿಕ್‌ ಏನೂ ಘಟಿಸುವುದಿಲ್ಲ. ಇಲ್ಲಿ ಸೌಂಡ್‌ ಆ್ಯಕ್ಟಿವೇಟೆಡ್‌ ವ್ಯವಸ್ಥೆ ಅಳವಡಿಸಲಾಗಿದೆ. ಇಲ್ಲಿ ಎಷ್ಟು ಜೋರಾಗಿ ಕಿರುಚುತ್ತಾರೋ ಅಷ್ಟು ಎತ್ತರಕ್ಕೆ ನೀರು ಚಿಮ್ಮುತ್ತದೆ. ಅಲ್ಲದೆ ಆಲ್ಟ್‌ ನ್ಯೂಸ್‌ ಸುದ್ದಿ ಸಂಸ್ಥೆ ವೈರಲ್‌ ಆಗಿರುವ ಸುದ್ದಿಯ ಮೂಲ ವಿಡಿಯೋವನ್ನು ಪತ್ತೆಹಚ್ಚಿದ್ದು, ಈ ಕಾರಂಜಿಯು ಥಾಯ್ಲೆಂಡ್‌ನಲ್ಲಿಲ್ಲ, ಚೀನಾದಲ್ಲಿದೆ ಎಂಬುದು ತಿಳಿದುಬಂದಿದೆ.