‘ವೈ.ವಿ ರೆಡ್ಡಿ- ಪಿಎಚ್‌ಡಿ ಎಕನಾಮಿಕ್ಸ್, ಡಿ ಸುಬ್ಬರಾವ್- ಪಿಎಚ್‌ಡಿ ಎಕನಾಮಿಕ್ಸ್, ರಘುರಾಂ ರಾಜನ್ - ಪಿಎಚ್‌ಡಿ ಎಕನಾಮಿಕ್ಸ್, ಊರ್ಜಿತ್ ಪಟೇಲ್- ಪಿಎಚ್‌ಡಿ ಎಕನಾಮಿಕ್ಸ್. ಶಕ್ತಿಕಾಂತ ದಾಸ್- ಎಂಎ ಹಿಸ್ಟರಿ.’‘ಕಾಲೇಜಿನಲ್ಲಿ ಶಕ್ತಿಕಾಂತ ದಾಸ್ ನನ್ನ ಸೀನಿಯರ್ ಆಗಿದ್ದರು. ಅವರು ಇತಿಹಾಸದ ವಿದ್ಯಾರ್ಥಿ. ಅವರ ಜೊತೆ ಓದಿದ ನಮ್ಮಂತಹ ಇನ್ನೂ ಕೆಲವರು ಈಗ ಆರ್‌ಬಿಐ ಗವರ್ನರ್ ಆಗುವ ಯೋಗ್ಯತೆ ನಮಗಿದೆ ಎಂದು ಎಕ್ಸೈಟ್ ಆಗಿದ್ದೇವೆ.’ 

ಆರ್‌ಬಿಐನ ನೂತನ ಗವರ್ನರ್ ಆಗಿ  ನೇಮಕಗೊಂಡಿರುವ ಮಾಜಿ ಹಣಕಾಸು ಕಾರ್ಯದರ್ಶಿ ಶಕ್ತಿಕಾಂತ ದಾಸ್ ಕೇವಲ ಇತಿಹಾಸದಲ್ಲಿ ಎಂಎ ಓದಿದ್ದಾರೆಂದೂ, ಅಂಥವರನ್ನು ತಂದು ಮೋದಿ ಇಷ್ಟು ದೊಡ್ಡ ಹುದ್ದೆಯಲ್ಲಿ ಕೂರಿಸಿದ್ದಾರೆಂದೂ ಅಣಕವಾಡುವ ಸಂದೇಶಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. 

ಪ್ರಸಿದ್ಧ ನ್ಯೂಸ್ ಚಾನಲ್ ಕೂಡ ತನ್ನ ವೆಬ್‌ಸೈಟಿನಲ್ಲಿ ಈ ಸುದ್ದಿ ಪ್ರಕಟಿಸಿದೆ. ಅರ್ಥಶಾಸ್ತ್ರ ಓದದೆ ಇತಿಹಾಸ ಓದಿಕೊಂಡವರು ಆರ್‌ಬಿಐ ಗರ್ವನರ್ ಆಗಿ ಏನುಮಾಡುತ್ತಾರೆಂಬ ಕುತೂಹಲದಿಂದ ಜನರೂ ಗೂಗಲ್‌ನಲ್ಲಿ ‘ಶಕ್ತಿಕಾಂತ ದಾಸ್ ಎಜುಕೇಶನ್’ ಎಂದು ಸರ್ಚ್ ಮಾಡುತ್ತಿದ್ದಾರೆ. 

ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ, ಶಕ್ತಿಕಾಂತ ದಾಸ್ ಇತಿಹಾಸದಲ್ಲಿ ಎಂಎ ಓದಿದ್ದು ನಿಜ. ಆದರೆ ನಂತರ ಬೆಂಗಳೂರು ಐಐಎಂನಲ್ಲಿ ಅಡ್ವಾನ್ಸಡ್ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್ ಕೋರ್ಸ್, ಎನ್‌ಐಬಿಎಂನಲ್ಲಿ ಡೆವಲಪ್‌ಮೆಂಟ್ ಬ್ಯಾಂಕಿಂಗ್ ಅಂಡ್ ಇನ್‌ಸ್ಟಿಟ್ಯೂಷನಲ್ ಕ್ರೆಡಿಟ್ ಕೋರ್ಸ್ ಗಳನ್ನೂ ಓದಿದ್ದಾರೆ. ನಂತರ ಐಎಎಸ್ ಮಾಡಿದ್ದಾರೆ. ಇನ್ನು, ಆರ್‌ಬಿಐ ಗವರ್ನರ್ ಆಗಲು ಅರ್ಥಶಾಸ್ತ್ರದ ಪದವಿ ಕಡ್ಡಾಯವಲ್ಲ. ಹೀಗಾಗಿ ‘ಶಕ್ತಿಕಾಂತ ದಾಸ್- ಎಂಎ ಇತಿಹಾಸ’ ಎಂಬ ವೈರಲ್ ಸುದ್ದಿ ಅರ್ಧ ಸತ್ಯವಷ್ಟೆ