ನೂತನವಾಗಿ ನಿರ್ಮಾಣವಾಗಿರುವ ಟಾರ್‌ ರಸ್ತೆಯ ಚಿತ್ರವನ್ನು ಪೋಸ್ಟ್‌ ಮಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ದೇಶವು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ ಎಂಬರ್ಥದ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿ ನೂತನ ರಸ್ತೆ ನಿರ್ಮಾಣವಾದ ಖುಷಿಯಲ್ಲಿ ಮಕ್ಕಳು ಚಪ್ಪಲಿಯನ್ನು ಪಕ್ಕಕ್ಕಿಟ್ಟು, ಬರಿಗಾಲಿನಲ್ಲಿ ರಸ್ತೆ ಮೇಲೆ ಆಟವಾಡುತ್ತಿದ್ದಾರೆ.

ಈ ಫೋಟೋವನ್ನು ‘ಪವನ್‌ ದುರಾಣಿ’ ಎಂಬ ಹೆಸರಿನ ಟ್ವೀಟರ್‌ ಖಾತೆಯು ಪೋಸ್ಟ್‌ ಮಾಡಿ, ‘ಮೂಲ ಸೌಲಭ್ಯವನ್ನೇ ಕಾಣದ ಹಳ್ಳಿಗಳಲ್ಲಿ ಮೊಟ್ಟಮೊದಲಬಾರಿಗೆ ರಸ್ತೆ ನಿರ್ಮಾಣವಾದಾಗ ಇದೆಲ್ಲಾ ಸಾಧ್ಯ. ಪ್ರಧಾನಿ ನರೇಂದ್ರ ಮೋದಿಯವರೇ.. ನಿಮ್ಮ ಕಾಳಜಿಗೆ ಧನ್ಯವಾದ’ ಎಂದು ಬರೆಯಲಾಗಿದೆ. ಈ ಪೋಸ್ಟ್‌ 2000 ಬಾರಿ ರೀಟ್ವೀಟ್‌ ಆಗಿದೆ. ಇದರ ಸ್ಕ್ರೀನ್‌ಶಾಟ್‌ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ಈ ಚಿತ್ರ ನಿಜಕ್ಕೂ ಭಾರತದ್ದೇ ಎಂದು ಪರಿಶೀಲಿಸಿದಾಗ ಇದು ಇಂಡೋನೇಷಿಯಾದ ಹಳ್ಳಿಯೊಂದರ ಫೋಟೋ ಎಂಬುದು ಸ್ಪಷ್ಟವಾಗಿದೆ.

 

‘ದಿ ಕ್ಯೂಬಿಕ್‌ ಟೈಮ್ಸ್‌’ ಎಂಬ ಸುದ್ದಿ ಸಂಸ್ಥೆಯು ಕಳೆದ ತಿಂಗಳ ಅಕ್ಟೋಬರ್‌ನಲ್ಲಿ ಈ ಕುರಿತ ಸುದ್ದಿಯೊಂದಿಗೆ ಈ ಫೋಟೋವನ್ನು ಪ್ರಕಟ ಮಾಡಿದೆ. ಅದರಲ್ಲಿ ‘ಇಂಡೋನೇಷಿಯಾದ ಹಳ್ಳಿಯೊಂದರಲ್ಲಿ ಇದೇ ಮೊದಲ ಬಾರಿಗೆ ಡಾಂಬರು ರಸ್ತೆ ಮಾಡಲಾಗಿತ್ತು. ಇದುವರೆಗೂ ಡಾಂಬರು ರಸ್ತೆಯನ್ನೇ ಕಂಡಿರದ ಆ ಹಳ್ಳಿಯಲ್ಲಿನ ಮಕ್ಕಳು ಚಪ್ಪಲಿ ತೆಗೆದಿಟ್ಟು ರಸ್ತೆ ಮೇಲೆ ಕುಣಿದು ಕುಪ್ಪಳಿಸಿದ್ದರು’ ಎಂದು ಬರೆಯಲಾಗಿದೆ. ಸದ್ಯ ಇದೇ ಫೋಟೋವನ್ನು ಬಳಸಿಕೊಂಡು ನರೇಂದ್ರ ಮೋದಿ ಮಾಡಿದ ಕೆಲಸ ಎಂದು ಸುಳುಸುದ್ದಿ ಹಬ್ಬಿಸಲಾಗಿದೆ.