ಸದ್ಯ ಅವನಿ ಹತ್ಯೆಯನ್ನು ಖಂಡಿಸಿ ಅಮೆರಿಕದ ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೃತ ಅವನಿಗೆ ಗೌರವ ಸಮರ್ಪಿಸಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ 13 ಜನರ ಸಾವಿಗೆ ಅವನಿ ಹೆಸರಿನ ಹುಲಿ ಕಾರಣವಾಗಿದೆ ಎಂದು ಹೇಳಲಾಗಿತ್ತು. ಅದಕ್ಕಾಗಿ ಸತತ ಎರಡು ತಿಂಗಳುಗಳ ಕಾಲ ಹುಡುಕಾಟ ನಡೆಸಿ ಪ್ರಾಣಿಪ್ರಿಯರ ವಿರೋಧದ ನಡುವೆಯೂ ಕೊಲ್ಲಲಾಗಿದೆ.
ಸದ್ಯ ಅವನಿ ಹತ್ಯೆಯನ್ನು ಖಂಡಿಸಿ ಅಮೆರಿಕದ ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೃತ ಅವನಿಗೆ ಗೌರವ ಸಮರ್ಪಿಸಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರೊಂದಿಗೆ, ‘ಅಮೆರಿಕದ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಅವನಿಗೆ ಗೌರವ ಸಲ್ಲಿಸಿದೆ. ಆದರೆ ಭಾರತ ಏಕೆ ಹುಲಿಗಳನ್ನು ಸಂರಕ್ಷಿಸದೆ ಸಾಯಿಸುತ್ತಿದೆ? ವಿಶ್ವದಲ್ಲೇ ಅತಿ ಹೆಚ್ಚು ಬೆಂಗಾಲ್ ಟೈಗರ್ಸ್ ಭಾರತದಲ್ಲಿವೆ. ಆದರೆ ಅವನತಿಯ ಹಾದಿಯಲ್ಲಿರುವ ಅವನಿಯಂತಹ ಪ್ರಾಣಿಯನ್ನು ಅಕ್ರಮವಾಗಿ ಕೊಲ್ಲಲಾಗುತ್ತಿದೆ. ಈಗ ಅವನಿಯ ಎರಡು ಮರಿಗಳ ಕತೆ ಏನು?’ ಎಂದು ಒಕ್ಕಣೆ ಬರೆಯಲಾಗಿದೆ. ಆದರೆ ನಿಜಕ್ಕೂ ಅಮೆರಿಕದಲ್ಲಿ ಅವನಿಗೆ ಗೌರವ ಸಲ್ಲಿಸಲಾಗಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಚಿತ್ರ 3 ವರ್ಷ ಹಳೆಯದು.
2015ರಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಉಳಿವಿನ ಬಗ್ಗೆ ಅರಿವು ಮೂಡಿಸಲು ನ್ಯೂಯಾರ್ಕ್'ನ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಲ್ಲಿ 40 ರೀತಿಯ ವಿಭಿನ್ನ ಪ್ರಾಣಿಗಳ ವಿಶ್ಯುವಲ್ ಲೈಟ್ ಶೋ ಏರ್ಪಡಿಸಲಾಗಿತ್ತು. ಅದರಲ್ಲಿ ಬ್ಲೂವೇಲ್ ಮೀನು ನೂರು ಅಡಿ ಎತ್ತರಕ್ಕೆ ಹಾರುವ ಚಿತ್ರವು ಬಹುಮಾನ ಪಡೆದಿತ್ತು. ಇದರಲ್ಲಿ ಹುಲಿ ಚಿತ್ರದ ಲೈಟ್ ಶೋ ಕೂಡ ಇತ್ತು. ಸದ್ಯ ಇದೇ ಫೋಟೋವನ್ನು ಬಳಸಿಕೊಂಡು ಅಮೆರಿಕವು ಮೃತ ಹುಲಿ ‘ಅವನಿ’ಗೆ ಗೌರವ ಸಮರ್ಪಿಸಿದೆ ಎಂದು ಸೋಷಿಯಲ್ ಮಿಡಿಯಾಗಳಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಗೊತ್ತಾಗಿದೆ.
