ಜಿಯೋ ಮುಖ್ಯಸ್ಥ ಮುಕೇಶ್‌ ಅಂಬಾನಿ ಹೊಸ ವರ್ಷದ ಪ್ರಯುಕ್ತ ಉಚಿತ ಟಿ-ಶರ್ಟ್‌ ನೀಡುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್‌ ಆಗಿರುವ ಸಂದೇಶದಲ್ಲಿ ಹೀಗಿದೆ, ‘ಜಿಯೋ ಮಾಲೀಕ ಮುಕೇಶ್‌ ಅಂಬಾನಿ ಹೊಸ ವರ್ಷದ ಕೊಡುಗೆಯಾಗಿ 1 ಲಕ್ಷ ಗ್ರಾಹಕರಿಗೆ ಟಿ-ಶರ್ಟ್‌ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ನಿಮ್ಮ ಬಳಿ ಜಿಯೋ ಸಿಮ್‌ ಇದ್ದರೆ ಕೆಳಗೆ ಕೊಟ್ಟಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಖಾಲಿ ಬಿಟ್ಟಿರುವ ಜಾಗದಲ್ಲಿ ಸೂಕ್ತ ಉತ್ತರಗಳನ್ನು ತುಂಬಿ. ನಿಮ್ಮ ಕುಟುಂಬದ ಯಾರೇ ಜಿಯೋ ಸಿಮ್‌ ಕಾರ್ಡ್‌ ಬಳಕೆ ಮಾಡುತ್ತಿದ್ದರೂ ಆ ಫೋನ್‌ನಿಂದ ಕೂಡ ನೋಂದಣಿ ಮಾಡಿಕೊಳ್ಳಬಹುದು. ಉಚಿತ ಶರ್ಟ್‌ ಪಡೆಯಲು ನೋಂದಣಿ ಮಾಡಿಕೊಳ್ಳಲು ಜನವರಿ 10 ಕೊನೆಯ ದಿನಾಂಕ’ ಎಂದು ಬರೆಯಲಾಗಿದೆ. ಸಂದೇಶದೊಂದಿಗೆ ವೆಬ್‌ಸೈಟ್‌ ವಿಳಾಸವನ್ನೂ ಲಗತ್ತಿಸಲಾಗಿದೆ.

ಆದರೆ ನಿಜಕ್ಕೂ ಜಿಯೋ ಉಚಿತ ಟಿ-ಶರ್ಟ್‌ ನೀಡುತ್ತಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ. ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ ಬಳಿಕ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಟಿ-ಶರ್ಟ್‌ ಬಣ್ಣ ಮತ್ತು ಸೈಜ್‌ ಏನು ಎಂಬುದನ್ನು ಭರ್ತಿ ಮಾಡುವಂತೆ ಕೇಳುತ್ತದೆ.

ಅನಂತರ ಈ ಸಂದೇಶವನ್ನು ಕನಿಷ್ಠ 10 ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ ಕಳುಹಿಸುವುದು ಕಡ್ಡಾಯ ಎಂಬ ಅಲರ್ಟ್‌ ಬರುತ್ತದೆ. ಅನಂತರ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಆ್ಯಪ್‌ವೊಂದನ್ನು ಡೌನ್‌ಲೋಡ್‌ ಮಾಡುವಂತೆ ಸೂಚಿಸುತ್ತದೆ. ಅಲ್ಲಿಗೆ ಇದೊಂದು ನಕಲಿ ಸಂದೇಶ ಎಂಬುದು ಸ್ಪಷ್ಟ. ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕುರಿತ ಯಾವುದೇ ಆಫರ್‌ಗಳಿಲ್ಲ. ಇತ್ತೀಚಿನ ದಿನಗಳಲ್ಲಿ ನಕಲಿ ವೆಬ್‌ಸೈಟಗಳನ್ನು ಮಾಡಿ ಜಾಹೀರಾತುಗಳಿಂದ ಹಣ ಮಾಡುವ ದಂಧೆ ನಡೆಯುತ್ತಿದೆ. ಇದೂ ಕುಡ ಅಂಥದ್ದೇ ಸಂದೇಶ.