ಉತ್ತರ ಪ್ರದೇಶ (ಜ. 18): ಸಂಕ್ರಾಂತಿ ದಿನದಂದು ಉತ್ತರ ಪ್ರದೇಶದ ಕುಂಭ ಮೇಳದಲ್ಲಿ ನರೇಂದ್ರ ಮೋದಿ ಮಿಂದರು ಎಂದು ಹೇಳಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ವಿ ಸಪೋರ್ಟ್ ನ್ಯಾಷನಲಿಸಂ’ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಮೊದಲಿಗೆ ಈ ಫೋಟೋಗಳನ್ನು ಪೋಸ್ಟ್ ಮಾಡಿ ‘ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದ ಚಿತ್ರಗಳಿವು’ ಎಂದು ಬರೆದಿದೆ.

ಸದ್ಯ ಈ ಪೋಸ್ಟ್ 400 ಬಾರಿ ಶೇರ್ ಆಗಿದೆ. ಬಿಜೆಪಿ ಮತ್ತು ನರೇಂದ್ರ ಮೋದಿ ಫ್ಯಾನ್ಸ್ ಈ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಆದರೆ ನಿಜಕ್ಕೂ ಉತ್ತರ ಪ್ರದೇಶದಲ್ಲಿ ಸದ್ಯ ನಡೆಯುತ್ತಿರುವ ಕುಂಭಮೇಳದಲ್ಲಿ ನರೇಂದ್ರ ಮೋದಿ ಪಾಲ್ಗೊಂಡು ಗಂಗಾ ನದಿಯಲ್ಲಿ ಮಿಂದಿದ್ದಾರೆಯೇ ಎಂದು ಪರಿಶೀಲಿಸಿದಾಗ ಇವು ಹಳೆಯ ಫೋಟೋ ಎಂದು ತಿಳಿದುಬಂದಿದೆ. ಆಲ್ಟ್ ನ್ಯೂಸ್ ಸುದ್ದಿ ಸಂಸ್ಥೆ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಈ ಫೋಟೋಗಳು 2004 ರದ್ದು ಎಂದು ತಿಳಿದುಬಂದಿದೆ.

ನೈದುನಿಯಾ-ಜಾಗರಣ್ ವರದಿಯಲ್ಲಿ ಈ ಬಗ್ಗೆ ಉಲ್ಲೇಖವಿದ್ದು, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಉಜ್ಜಯಿನಿಯಲ್ಲಿ ನಡೆದ ಹಿಂದೂ ಧಾರ್ಮಿಕ ಸಮಾರಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದರು ಎಂದಿದೆ. ಸದ್ಯ ಅದೇ ಫೋಟೋವನ್ನು ಬಳಸಿಕೊಂಡು ಪ್ರಯಾಗ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಮಿಂದ ಪ್ರಧಾನಿ ಮೋದಿ ಎಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ. 

- ವೈರಲ್ ಚೆಕ್