ಟರ್ಕಿಯಲ್ಲಿ ನರೇಂದ್ರ ಮೋದಿ ಚಿತ್ರವಿರುವ ಸ್ಟ್ಯಾಂಪ್ ಬಿಡುಗಡೆ ಮಾಡಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ಮಾಹಿತಿ
ಟರ್ಕಿ ದೇಶದಲ್ಲಿ ನರೇಂದ್ರ ಮೋದಿ ಚಿತ್ರವಿರುವ ಸ್ಟ್ಯಾಂಪ್ ಬಿಡುಗಡೆ ಮಾಡಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೋದಿ ಭಾವಚಿತ್ರವಿರುವ ಸ್ಟ್ಯಾಂಪನ್ನು ಪೋಸ್ಟ್ ಮಾಡಿ ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಗತ್ತಿನ ಶ್ರೇಷ್ಟನಾಯಕ ಎಂಬ ಬಿರುದು ನೀಡಿ ಟರ್ಕಿ ದೇಶದಲ್ಲಿ ಸ್ಟ್ಯಾಂಪ್ ಬಿಡುಗಡೆ ಮಾಡಲಾಗಿದೆ. ಈ ಸಂತಸದ ಸಂಗತಿ ತಿಳಿದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಲೇಬೇಕು’ ಎಂದು ಒಕ್ಕಣೆ ಬರೆಯಲಾಗಿದೆ. ಈ ಸಂದೇಶ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಆದರೆ ನಿಜಕ್ಕೂ ಟರ್ಕಿಯಲ್ಲಿ ನರೇಂದ್ರ ಮೋದಿ ಸ್ಟ್ಯಾಂಪ್ ಬಿಡುಗಡೆ ಮಾಡಲಾಗಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಬಯಲಾಗಿದೆ. ವಾಸ್ತವವಾಗಿ ಈ ಫೋಟೋ 2015ರದ್ದು. 2015 ನವೆಂಬರ್ 15ರಂದು ಟರ್ಕಿಯಲ್ಲಿ ಜಿ-20 ಸಮಾವೇಶ ಆಯೋಜನೆಗೊಂಡಿತ್ತು. ಆ ಸಮಾವೇಶದ ವೇಳೆ ‘ದ ಟರ್ಕಿಷ್ ಪೋಸ್ಟ್’ ಇಂಟರ್‌ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಪೋಸ್ಟ್ ಆಫೀಸ್‌ವೊಂದನ್ನು ತೆರೆದಿತ್ತು. ಆಗ ಜಿ-20 ಪೋಸ್ಟ್ ಕಾರ್ಡ್ ಹೊಂದಿರುವವರಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಿತ್ತು. ಅದರಲ್ಲಿ ಜಿ-20 ಸಮಾವೇಶದಲ್ಲಿ ಪಾಲ್ಗೊಳ್ಳುವ ಎಲ್ಲಾ ವಿಶೇಷ ಆಹ್ವಾನಿತರ ಫೋಟೋವನ್ನೂ, ಅವರವರ ದೇಶದ ರಾಷ್ಟ್ರಧ್ವಜದ ಚಿತ್ರದೊಂದಿಗೆ ಪ್ರಕಟಿಸಲಾಗಿತ್ತು.

ಎಲ್ಲರ ಫೋಟೋಗಳೊಟ್ಟಿಗೆ ಮೋದಿ ಫೋಟೋವೂ ಇತ್ತು. ಆ ಸ್ಟ್ಯಾಂಪ್‌ಗಳಲ್ಲಿ ಮೋದಿ ಚಿತ್ರವಿರುವ ಸ್ಟ್ಯಾಂಪ್‌ಗಳನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಈ ರೀತಿಯ ಸುಳ್ಳುಸುದ್ದಿಗಳನ್ನು ಹರಡಲಾಗುತ್ತಿದೆ. 2015ರಿಂದಲೂ ಇದೇ ರೀತಿಯ ಪೋಸ್ಟ್‌ಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
