ಕಾಂಗ್ರೆಸ್‌ನ ಹಿರಿಯ ನಾಯಕ ಟಿಎಸ್‌ ಸಿಂಗ್‌ ದಿಯೋ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಾಲಿಗೆ ನಮಿಸಿದರು ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜಕ್ಕೂ ಕಾಂಗ್ರೆಸ್‌ನ ಈ ಹಿರಿಯ ನಾಯಕ ರಾಹುಲ್ ಕಾಲಿಗೆ ಬಿದ್ದಿದ್ದರಾ? ಇಲ್ಲಿದೆ ವಿವರ

ಛತ್ತೀಸ್‌ಗಢದಲ್ಲಿ ನೂತನ ಸರ್ಕಾರ ರಚನೆಯಾದ ಬಳಿಕ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಟಿಎಸ್‌ ಸಿಂಗ್‌ ದಿಯೋ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಾಲಿಗೆ ನಮಿಸಿದರು ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫೋಟೋ ಸಿಂಗ್‌ ದಿಯೋ ಬಾಗಿ ರಾಹುಲ್‌ ಗಾಂಧಿ ಕಾಲಿಗೆ ನಮಸ್ಕರಿಸುವಂತಿದೆ. ಪೋಟೋದಲ್ಲಿ ಮನಮೋಹನ ಸಿಂಗ್‌ ಸೇರಿದಂತೆ ಮತ್ತಿತರ ನಾಯಕರಿದ್ದಾರೆ. ಈ ಫೋಟೋವನ್ನು ‘ಐ ಸಪೋರ್ಟ್‌ ಮೋದಿ ಜಿ ಮತ್ತು ಬಿಜೆಪಿ’ ಹೆಸರಿನ ಫೇಸ್‌ಬುಕ್‌ ಪೇಜ್‌ಗಳು ಶೇರ್‌ ಮಾಡಿವೆ. ಸದ್ಯ ಈ ಪೋಟೋ ವೈರಲ್‌ ಆಗಿದೆ. ಆದರೆ ನಿಜಕ್ಕೂ ಛತ್ತೀಸ್‌ಗಢದಲ್ಲಿ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರದ ಬಳಿಕ ಸಿಂಗ್‌ ರಾಹುಲ್‌ ಕಾಲಿಗೆ ನಮಸ್ಕರಿಸಿದರೇ ಎಂದು ಪರಿಶೀಲಿಸಿದಾಗ ಈ ಫೋಟೋವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದು ಬಯಲಾಗಿದೆ. ಕಾರಣ ವೈರಲ್‌ ಆಗಿರುವ ಸಂದೇಶದಲ್ಲಿ ಸಿಂಗ್‌ಗೆ 78 ವರ್ಷ ವಯಸ್ಸು ಎಂದು ಹೇಳಲಾಗಿದೆ ಆದರೆ ವಾಸ್ತವವಾಗಿ ಸಿಂಗ್‌ ಅವರಿಗೆ 67 ವರ್ಷ ವಯಸ್ಸು.

ಇನ್ನೊಂದು; ಸಿಂಗ್‌ ರಾಹುಲ್‌ ಕಾಲಿಗೆರಗಿದರು ಎಂಬ ಸುದ್ದಿಯೂ ಸುಳ್ಳು. ಏಕೆಂದರೆ ರಾಯ್ಪುರ ಮೂಲದ ಹಿರಿಯ ಛಾಯಾಚಿತ್ರಗಾರರೊಬ್ಬರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿದ್ದು, ‘ನಾನು ಈ ಸನ್ನಿವೇಶದಲ್ಲಿ ಹಾಜರಿದ್ದೆ. ಸಿಂಗ್‌ ರಾಹುಲ್‌ ಕಾಲಿಗೆರಗಲಿಲ್ಲ. ಬದಲಾಗಿ ಕೆಳಗೆ ಬಿದ್ದ ಹೂಗುಚ್ಛದ ದಾರವನ್ನು ಮೇಲೆತ್ತಿಕೊಳ್ಳಲು ಬಾಗಿದ್ದರು. ನೀವೇ ನೋಡುತ್ತಿರುವಂತೆ ಹೂಗುಚ್ಛ ಮನಮೋಹನ್‌ ಸಿಂಗ್‌ ಅವರ ಕೈಲಿದೆ. ನಿಜವಾಗಿಯೂ ಸಿಂಗ್‌ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕಾಲಿಗೆ ನಮಸ್ಕರಿಸಲಿಲ್ಲ’ ಎಂದು ಕ್ವಿಂಟ್‌ಗೆ ಸ್ಪಷ್ಟೀಕರಣ ನೀಡಿದ್ದಾರೆ. ಜೊತೆಗೆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ದಾರವೊಂದು ಬಿದ್ದಿರುವುದು ಕಾಣಿಸುತ್ತದೆ.