ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ಹಾಕಬೇಡಿ ಎಂದು ನರೇಂದ್ರ ಮೋದಿ ಪತ್ನಿ ಜಶೋದಾ ಬೇನ್‌ ಹೇಳಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 90 ಸೆಕೆಂಡ್‌ಗಳಿರುವ ವಿಡಿಯೋದಲ್ಲಿ ಜಶೋದಾಬೆನ್‌ ಗುಜರಾತಿ ಬಾಷೆಯಲ್ಲಿ ಮಾತನಾಡಿದ್ದು, ಅದನ್ನು ಮೊಬೈಲ್‌ ಕ್ಯಾಮೆರಾದಲ್ಲಿ ರೆಕಾರ್ಡ್‌ ಮಾಡಲಾಗಿದೆ. ಈ ವಿಡಿಯೋ ಸದ್ಯ ವೈರಲ್‌ ಆಗಿದೆ.

ಈ ವಿಡಿಯೋದೊಂದಿಗೆ,‘2019ರಲ್ಲಿ ನರೇಂದ್ರ ಮೋದಿಗೆ ಮತ ಹಾಕದಂತೆ ಮೋದಿ ಪತ್ನಿ ಜಶೋದಾಬೆನ್‌ ಮನವಿ ಮಾಡಿಕೊಂಡಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ. ಆದರೆ ನಿಜಕ್ಕೂ ಜಶೋದಾಬೆನ್‌ ಹಾಗೆ ಹೇಳಿದ್ದಾರೆಯೇ ಎಂದು ಪರಿಶೀಲಿಸಿದಾಗ ವಾಸ್ತವ ಏನೆಂಬುದು ಪತ್ತೆಯಾಗಿದೆ.

ಮೂಲ ವಿಡಿಯೋ ಗುಜರಾತಿ ಭಾಷೆಯಲ್ಲಿದ್ದು, ಅದರ ಅನುವಾದವು ಹೀಗಿದೆ: ‘ನಾನು ಜಶೋದಾಬೆನ್‌ ನರೇಂದ್ರ ಕುಮಾರ್‌ ಮೋದಿ, ಹೇಳುವುದೇನೆಂದರೆ ಗುಜರಾತ್‌ ದಿನಪತ್ರಿಯ ಮುಖಪುಟದಲ್ಲಿ ಪ್ರಕಟವಾದ ಸುದ್ದಿ ಸುಳ್ಳು. ಆನಂದಿಬೇನ್‌ ಅವರ ವರ್ತನೆಯು ನನಗೆ ಮತ್ತು ನನ್ನ ಪತಿಗೆ ನೋವುಂಟುಮಾಡಿದೆ. ನನ್ನ ಪತಿ ಶ್ರೀರಾಮನಿದ್ದಂತೆ. ಅವರನ್ನು ತೇಜೋವಧೆ ಮಾಡಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ. ಜಶೋದಾಬೆನ್‌ ನಿಂದನೆ ದೇಶದ ಪ್ರಧಾನಿಯನ್ನು ನಿಂದಿಸಿದಂತೆ. ನನ್ನ ಪತಿ ಪ್ರಧಾನಮಂತ್ರಿಯಾದ ಬಳಿಕ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಸ್ಪಷ್ಟವಾಗಿ ಹೆಂಡತಿ ಹೆಸರಿರುವ ಜಾಗದಲ್ಲಿ ನನ್ನ ಹೆಸರು ಬರೆದಿದ್ದಾರೆ. ಅದನ್ನು ನೋಡಿಯೂ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿ ಬೇನ್‌ ಪಟೇಲ್‌ ‘ಮೋದಿ ಮದುವೆಯೇ ಆಗಿಲ್ಲ’ ಎಂದು ಬೇಜವ್ದಾರಿಯ ಹೇಳಿಕೆ ನೀಡಿದ್ದಾರೆ’ ಎಂದಿದೆ. ಎಲ್ಲಿಯೂ 2019ರಲ್ಲಿ ನರೇಂದ್ರ ಮೋದಿಗೆ ಮತ ಹಾಕಬೇಡಿ ಎಂದು ಹೇಳಿಲ್ಲ.