ವಿಕಿಲೀಕ್ಸ್ ಸಂಸ್ಥೆಯು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೊಲಂಬಿಯಾ ಮಹಿಳೆಯೊಬ್ಬರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆಂದು ವರದಿ ಮಾಡಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಾಸ್ತವ
ನವದೆಹಲಿ[ಏ.26]: ವಿಕಿಲೀಕ್ಸ್ ಸಂಸ್ಥೆಯು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೊಲಂಬಿಯಾ ಮಹಿಳೆಯೊಬ್ಬರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆಂದು ವರದಿ ಮಾಡಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರಾಹುಲ್ ಗಾಂಧಿಯವರೊಂದಿಗೆ ವಿದೇಶಿ ಮಹಿಳೆ ಇರುವ ಫೋಟೋವನ್ನು ಪೋಸ್ಟ್ ಮಾಡಿ, ‘ರಾಹುಲ್ ವಿನ್ಸಿ ವಿವಾಹಿತ. ಅವರಿಗೆ ಇಬ್ಬರು ಮಕ್ಕಳಿದ್ದು ಅವರು ಲಂಡನ್‌ನಲ್ಲಿ ವಾಸುತ್ತಿದ್ದಾರೆ. ಅವರ ಪತ್ನಿ ಕೊಲಂಬಿಯಾದವರು. ಮೊದಲ ಮಗುವಿಗೆ 14 ವರ್ಷ, ಎರಡನೇ ಮಗುವಿಗೆ 10 ವರ್ಷ. ಎಂದು ವಿಕಿಲೀಕ್ಸ್ ಬಯಲು ಮಾಡಿದೆ. ಭಾರತದಲ್ಲಿ ರಾಹುಲ್ ತಮ್ಮನ್ನು ತಾವು ‘ಅವಿವಾಹಿತ’ ಎಂದು ಕರೆದುಕೊಂಡು ದಾರಿ ತಪ್ಪಿಸುತ್ತಿದ್ದಾರೆ ’ಎಂದು ಒಕ್ಕಣೆ ಬರೆಯಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಆದರೆ ವಿಕಿಲೀಕ್ಸ್ ನಿಜಕ್ಕೂ ರಾಹುಲ್ ಗಾಂಧಿ ವಿವಾಹ ಸಂಬಂಧ ಕುರಿತು ವರದಿ ಮಾಡಿದೆಯೇ ಎಂದು ಪರಿಶೀಲಸಿದಾಗ ಇದೊಂದು ಸುಳ್ಳುಸುದ್ದಿ ಎಂದು ಸಾಬೀತಾಗಿದೆ. ಬೂಮ್‌ಲೈವ್ ಸುದ್ದಿಸಂಸ್ಥೆ ರಾಹುಲ್ ಗಾಂಧಿ ಕುರಿತ ವಿಕಿಲೀಕ್ಸ್ ಕೇಬಲ್ ಅಥವಾ ಲೇಖನಗಳನ್ನು ಪರಿಶೀಲಿಸಿದಾಗ ಅವರ ವಿವಾಹ ಸಂಬಂಧಗಳ ಕುರಿತ ಯಾವುದೇ ಲೇಖನ ಪತ್ತೆಯಾಗಿಲ್ಲ.
ಜೊತೆಗೆ ಬೂಮ್ ವೈರಲ್ ಆಗಿರುವ ಫೋಟೋ ಜಾಡು ಹಿಡಿದು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ, ಫೋಟೋದಲ್ಲಿ ರಾಹುಲ್ ಗಾಂಧಿ ಅವರೊಂದಿಗಿರುವ ಮಹಿಳೆ ಸ್ಪ್ಯಾನಿಶ್-ಅಮೆರಿಕದ ಟೆಲಿವಿಷನ್ ಸೀರೀಸ್‌ಗಳಲ್ಲಿ ನಟಿಸುವ ನಟಿ. ಅವರ ಹೆಸರು, ನತಾಲಿಯಾ ರಮೋಸ್. ನತಾಲಿಯಾ ಸೆಪ್ಟೆಂಬರ್ 15, 2017ರಲ್ಲಿ ರಾಹುಲ್ ಗಾಂಧಿ ಅವರೊಂದಿಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಲಾಸ್‌ಏಂಜಲೀಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಇಬ್ಬರು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಬಳಿಸಿಕೊಂಡು ಸುಳ್ಳುಸುದ್ದಿ ಹರಡಲಾಗುತ್ತಿದೆ.
