ಅಮೂಲ್‌ ಜಾಹೀರಾತೊಂದರಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಕಾರ್ಟೂನ್‌ ಇರುವ ಜಾಹೀರಾತು ಫಲಕದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಮೂಲ್‌ ಟ್ರೇಡ್‌ ಮಾರ್ಡ್‌ ವಿನ್ಯಾಸದ ಬಿಲ್‌ಬೋರ್ಡ್‌ ಮೇಲೆ ರಾಹುಲ್‌ ಮತ್ತು ಪ್ರಿಯಾಂಕಾ ಚಿತ್ರವಿದ್ದು ಅದರೊಂದಿಗೆ, ‘ಅಜ್ಜ ತಿಂದರು, ಅಜ್ಜಿಯೂ ತಿಂದರು, ಅಪ್ಪ-ಅಮ್ಮ ತಿಂದರು ಮತ್ತು ಸಹೋದರಿ ನೀನೂ ಬಾ ತಿನ್ನು, ಬಾವನನ್ನೂ ಕರೆ’ ಎಂದು ಹಿಂದಿಯಲ್ಲಿ ಒಕ್ಕಣೆ ಬರೆಯಲಾಗಿದೆ. ‘ತಿಂದರು’ ಎಂಬ ಪದವನ್ನು ‘ಭ್ರಷ್ಟಾಚಾರ’ ಎಂಬ ಪದಕ್ಕೆ ಪರಾರ‍ಯಯವಾಗಿ ವಿಡಂಬನಾತ್ಮಕವಾಗಿ ಬಳಸಲಾಗಿದೆ.

ಈ ಫೋಟೋ ಟ್ವೀಟರ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ. ಬೂಮ್‌ ಈ ಬಗ್ಗೆ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ, ಫೋಟೋದಲ್ಲಿವಂಥದ್ದೇ ಕಾರು ಮತ್ತು ಬೇರೆ ಬೇರೆ ಚಿತ್ರಗಳಿರುವ ಬಿಲ್‌ಬೋರ್ಡ್‌ಗಳು ಲಭ್ಯವಾಗಿವೆ.

ಇದರರ್ಥ ಅಮೂಲ್‌ ಜಾಹೀರಾತನ್ನು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ, ರಾಹುಲ್‌ ಮತ್ತು ಪ್ರಿಯಾಂಕಾ ಚಿತ್ರವನ್ನು ಜೋಡಿಲಾಗಿದೆ. ಅಲ್ಲದೆ ವೈರಲ್‌ ಆಗಿರುವ ಬೋರ್ಡ್‌ನ ಕೆಳಗೆ, ಎಡಭಾಗದಲ್ಲಿ ‘ರತ್ನೇಶ್‌’ ಎಂದು ಬರೆದಿರುವುದನ್ನು ಕಾಣಬಹುದು.

2019 ಜನವರಿ 24ರಂದು ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಪ್ರವೇಶಿಸಿದಾಗ ಅಮೂಲ್‌ ಸ್ವಾಗತ ಕೋರಿ ಕಾರ್ಟೂನ್‌ವೊಂದನ್ನು ಬಿಡುಗಡೆ ಮಾಡಿತ್ತು. ಈ ಕಾರ್ಟೂನ್‌ನ ಎಡಭಾಗದಲ್ಲಿ ‘ಅಮೂಲ್‌ ಫಾರ್‌ ಬೈಯಾಸ್‌ ಆ್ಯಂಡ್‌ ಬೆಹೆನ್ಸ್‌’ ಎಂದು ಬರೆಯಲಾಗಿದೆ. ಸದ್ಯ ಅದೇ ಕಾರ್ಟೂನ್‌ನ್ನು ಎಡಿಟ್‌ ಮಾಡಿ ಈ ರೀತಿಯ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.

- ವೈರಲ್ ಚೆಕ್