ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ವೈಎಸ್‌ಆರ್‌ಸಿಪಿ ಶಾಸಕಿ ರೋಜಾ ಅವರನ್ನು ಕುವೈತ್‌ನಲ್ಲಿ ಬಂಧಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ವೈಎಸ್ಆರ್ಸಿಪಿ ಶಾಸಕಿ ರೋಜಾ ಅವರನ್ನು ಕುವೈತ್ನಲ್ಲಿ ಬಂಧಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಸರಾ ಹಬ್ಬದ ರಜೆಯ ನಿಮಿತ್ತ ರೋಜಾ ತಮ್ಮ ಕುಟುಂಬದವರ ಸಮೇತ ಕುವೈತ್ ಪ್ರವಾಸ ಕೈಗೊಂಡಿದ್ದಾರೆ. ಅನಿವಾಸಿ ಭಾರತೀಯರು ಏರ್ಪಡಿಸಿದ್ದ ವೈಎಸ್ಆರ್ಸಿ ಪಕ್ಷದ ಸಭೆಯಲ್ಲಿ ರೋಜಾ ಪಾಲ್ಗೊಂಡಿದ್ದರು. ಆದರೆ, ಈ ಸಭೆ ಆಯೋಜನೆಗೆ ಸಂಘಟಕರು ಪೊಲೀಸರಿಂದ ಅನುಮತಿ ಪಡೆದುಕೊಂಡಿರಲಿಲ್ಲ. ಸಭೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಸಿಳ್ಳೆ ಹೊಡೆದು, ಚೀರಾಟ ನಡೆಸಿ ಗದ್ದಲ ಎಬ್ಬಿಸಿದ್ದರು. ರೋಜಾ ಅವರ ಭಾಷಣ ನೆರೆದಿದ್ದ ಜನಸಮೂಹವನ್ನು ಇನ್ನಷ್ಟು ಕೆರಳಿಸಿತ್ತು. ಕಾರ್ಯಕರ್ತರು ಗದ್ದಲ ನಡೆಸಿದ್ದರಿಂದ ಹೋಟೆಲ್ನ ಇತರ ಕೋಣೆಯಲ್ಲಿದ್ದ ಜನರು ಪೊಲೀಸರಿಗೆ ದೂರು ನೀಡಿದ್ದರು. ಈ ಕಾರಣಕ್ಕಾಗಿ ಪೊಲೀಸರು ರೋಜಾ ಅವರನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಆದರೆ, ತಮ್ಮ ಬಂಧನ ಸುದ್ದಿಯ ಬಗ್ಗೆ ಸ್ವತಃ ರೋಜಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಕ್ಕೆ ಒಂದು ನಿಮಿಷದ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ‘ಕುವೈತ್ನಲ್ಲಿ ಸಭೆ ಶಾಂತಿಯುತವಾಗಿ ನಡೆದಿದೆ. ಆದರೆ, ಕಾರ್ಯಕ್ರಮದ ವೇಳೆ ನನ್ನನ್ನು ಬಂಧಿಸಲಾಯಿತು ಎಂದು ಕೆಲ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ಇದೊಂದು ಸಣ್ಣ ಸಭೆ ಎಂದು ನಾವೆಲ್ಲಾ ಭಾವಿಸಿದ್ದೆವು. ಆದರೆ, ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನ ಸೇರಿದ್ದರು. ಹೀಗಾಗಿ ಕುವೈತ್ ಪೊಲೀಸರು ಬಂದು ವಿಚಾರಿಸಿದರು. ಆದರೆ, ಸಂಘಟಕರು ಪೊಲೀಸರಿಗೆ ಸೂಕ್ತ ಸ್ಪಷ್ಟನೆ ನೀಡಿದರು. ಪೊಲೀಸರು ನಮಗೆ ಯಾವುದೇ ತೊಂದರೆ ನೀಡಲಿಲ್ಲ. ನನ್ನ ಬಂಧನ ಕೇವಲ ವದಂತಿ’ ಎಂದು ಸ್ಪಷ್ಟನೆ ನೀಡಿದ್ದಾರೆ.
![[ವೈರಲ್ ಚೆಕ್] ಕುವೈತ್ನಲ್ಲಿ ಗದ್ದಲ ಎಬ್ಬಿಸಿ ನಟಿ ಶಾಸಕಿ ರೋಜಾ ಅರೆಸ್ಟ್ ಆದ್ರಂತೆ! [ವೈರಲ್ ಚೆಕ್] ಕುವೈತ್ನಲ್ಲಿ ಗದ್ದಲ ಎಬ್ಬಿಸಿ ನಟಿ ಶಾಸಕಿ ರೋಜಾ ಅರೆಸ್ಟ್ ಆದ್ರಂತೆ!](https://static.asianetnews.com/images/w-1280,h-720,imgid-a539cafa-d3f5-4289-901b-92f9c59f50fe,imgname-image.jpg)