ಪಂಚಕುಲಾದ ಸಿಬಿಐ ಕೋರ್ಟ್ ಆವರಣವು ಪೊಲೀಸ್ ಭದ್ರತೆಯಲ್ಲಿ ಏಳು ಸುತ್ತಿನ ಕೋಟೆಯಾಗಿ ಮಾರ್ಪಟ್ಟಿದೆ. ರಾಮ್ ರಹೀಮ್ ಭಕ್ತರ ದಂಡು ಪಕ್ಕದ ಸಿರ್ಸಾದಲ್ಲಿನ ಡೇರಾ ಸಚ್ಚಾ ಸೌಧಾ ಆಶ್ರಮಕ್ಕೆ ಧಾವಿಸಿ ಮುನ್ನುಗ್ಗುತ್ತಿದ್ದು, ಆಶ್ರಮದಲ್ಲಿ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪಂಚಕುಲಾ(ಆ. 25): ರೇಪ್ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಬಾಬಾ ಅಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅಸಂಖ್ಯಾತ ಬಾಬಾ ಭಕ್ತರಿಂದ ಹಿಂಸಾಚಾರ ಭುಗಿಲೆದ್ದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಕೋರ್ಟ್ ಆವರಣದ ಸಮೀಪ ನೆರದಿದ್ದ ಡೇರಾ ಸಚ್ಚಾ ಸೌಧಾ ಸಂಘಟನೆಯ ಬೆಂಬಲಿಗರು ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಆಕ್ರೋಶಗೊಂಡು ಹಿಂಸಾಚಾರದಲ್ಲಿ ನಿರತರಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ ನಡೆದಿದೆ. ಹಿಂಸಾಚಾರದಲ್ಲಿ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ವಿವಿಧ ಖಾಸಗಿ ಮ್ಯಾಧ್ಯಮಗಳಿಗೆ ಸೇರಿದ ಓಬಿ ವ್ಯಾನ್'ಗಳು ಬಾಬಾ ಭಕ್ತರ ಆಕ್ರೋಶಕ್ಕೆ ಸಿಕ್ಕು ಸುಟ್ಟುಹೋಗಿವೆ. ಎರಡು ರೈಲ್ವೆ ಸ್ಟೇಷನ್'ಗಳು ಬೆಂಕಿಗೆ ಆಹುತಿಯಾಗಿವೆ. ಪೊಲೀಸ್ ವ್ಯಾನ್'ಗಳೂ ಭಕ್ತರ ಆಕ್ರೋಶಕ್ಕೆ ತುತ್ತಾಗಿವೆ. ಹಲವು ಪೆಟ್ರೋಲ್ ಬಂಕ್'ಗಳಿಗೆ ಗಲಭೆಕೋರರು ಬೆಂಕಿಹಚ್ಚಿದ್ದಾರೆ.

ಇದೇ ವೇಳೆ, ಪಂಚಕುಲಾದ ಸಿಬಿಐ ಕೋರ್ಟ್ ಆವರಣವು ಪೊಲೀಸ್ ಭದ್ರತೆಯಲ್ಲಿ ಏಳು ಸುತ್ತಿನ ಕೋಟೆಯಾಗಿ ಮಾರ್ಪಟ್ಟಿದೆ. ರಾಮ್ ರಹೀಮ್ ಭಕ್ತರ ದಂಡು ಪಕ್ಕದ ಸಿರ್ಸಾದಲ್ಲಿನ ಡೇರಾ ಸಚ್ಚಾ ಸೌಧಾ ಆಶ್ರಮಕ್ಕೆ ಧಾವಿಸಿ ಮುನ್ನುಗ್ಗುತ್ತಿದ್ದು, ಆಶ್ರಮದಲ್ಲಿ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪಂಜಾಬ್ ಮತ್ತು ಹರಿಯಾಣದ 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಾಬಾ ರಾಮ್ ರಹೀಮ್'ನ ಬೆಂಬಲಿಗರು ಪ್ರತಿಭಟನೆಯಲ್ಲಿ ನಿರತರಾಗುತ್ತಿರುವ ಹಿನ್ನೆಲೆಯಲ್ಲಿ ಮನ್ಸಾ, ಪಂಚಕುಲಾ, ಭಟಿಂಡಾ, ಫಿರೋಜ್'ಪುರ ಸೇರಿದಂತೆ ಎರಡು ರಾಜ್ಯಗಳ 5 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹಿಂಸಾಚಾರ ಹೆಚ್ಚಾಗುವ ಅಪಾಯವಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ತುರ್ತು ಸಭೆ ಕರೆದಿದ್ದು ಸೇನಾ ತುಕಡಿಗಳನ್ನು ಗಲಭೆ ನಿಯಂತ್ರಣಕ್ಕೆ ಬಳಕೆ ಮಾಡಿದೆ. ಇನ್ನು, ರೇಪ್ ಪ್ರಕರಣದ ದೋಷಿ ಗುರ್ಮೀತ್ ರಾಮ್ ರಹೀಮ್ ಅವರನ್ನು ಹೆಲಿಕಾಪ್ಟರ್ ಮೂಲಕ ರೋಹ್ಟಕ್ ಜಿಲ್ಲೆಗೆ ಸಾಗಿಸಲಾಗುತ್ತಿದೆ.