ನವದೆಹಲಿ[ಜು.27]: ಇನ್ನು ಮುಂದೆ ವೈದ್ಯರ ಮೇಲೆ ಹಲ್ಲೆ ಅಥವಾ ದಾಳಿ ನಡೆಸುವ ದುಷ್ಕರ್ಮಿಗಳು 10 ವರ್ಷ ಜೈಲು ಶಿಕ್ಷೆ ಅಥವಾ 10 ಲಕ್ಷ ರು. ದಂಡ ಕಟ್ಟಬೇಕಾಗುತ್ತದೆ ಹುಷಾರ್‌.

ಹೌದು, ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಹಾಗೂ ವೈದ್ಯರ ನಡುವಿನ ವೈಷಮ್ಯಕ್ಕೆ ಕಾರಣವಾಗಿದ್ದ ವೈದ್ಯರ ಮೇಲಿನ ದಾಳಿ ಹಾಗೂ ದೇಶಾದ್ಯಂತ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಯಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇಂಥ ಘಟನೆಗಳ ತಡೆಗೆ ಕಠಿಣ ಕೇಂದ್ರೀಯ ಕಾನೂನು ರೂಪಿಸಲು ಮುಂದಾಗಿದೆ.

ಸೇವಾವಧಿ ವೇಳೆ ರೋಗಿಗಳ ಕಡೆಯವರಿಂದ ಅಥವಾ ಇನ್ನಿತರರಿಂದ ವೈದ್ಯರ ಮೇಲೆ ನಡೆಯುವ ದಾಳಿಗಳನ್ನು ಸಿಆರ್‌ಪಿಸಿ ಹಾಗೂ ಐಪಿಸಿ ಸೆಕ್ಷನ್‌ಗಳಡಿ ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸುವ ಅಧ್ಯಯನಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯ 10 ಸದಸ್ಯರ ಸಮಿತಿಯೊಂದನ್ನು ರಚನೆ ಮಾಡಿದೆ. ಜೊತೆಗೆ, ಇತ್ತೀಚೆಗಷ್ಟೇ ನಡೆದ 10 ಸದಸ್ಯರ ಸಮಿತಿ ಸಭೆಯಲ್ಲಿ ಈ ಕುರಿತಾದ ಕರಡು ಮಸೂದೆ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ದೇಶದಲ್ಲಿ ಇಂಥ ಒಂದು ಮಹತ್ವದ ಕಾನೂನು ಜರೂರಾಗಿದೆ ಎಂದು ಅವಿರೋಧವಾಗಿ ಅಭಿಪ್ರಾಯಪಟ್ಟಿರುವ ಸಮಿತಿ, ಈ ಕುರಿತಾದ ಮಸೂದೆಯ ಕರಡು ರಚನೆಗಾಗಿ 8 ಸದಸ್ಯರ ಉಪ ಸಮಿತಿಯನ್ನು ಸಹ ನೇಮಿಸಲಾಗಿದೆ.

ವೈದ್ಯರ ಹಲ್ಲೆಗೆ ಏನೆಲ್ಲಾ ಶಿಕ್ಷೆಗಳು

ವೈದ್ಯರ ಮೇಲಿನ ಹಲ್ಲೆಯು ಜಾಮೀನು ರಹಿತ ಅಪರಾಧ

ಕೃತ್ಯವೆಸಗಿದವನನ್ನು ವಾರೆಂಟ್‌ ಇಲ್ಲದೆ ಬಂಧಿಸಬಹುದು

ಜಾಮೀನು ಸಿಗುವವರೆಗೂ ಆರೋಪಿಗೆ ಬಿಡುಗಡೆ ಭಾಗ್ಯವಿಲ್ಲ

ಯಾವ ತಪ್ಪಿಗೆ ಎಷ್ಟು ಶಿಕ್ಷೆ?

ವೈದ್ಯರ ಮೇಲಿನ ಸಾಮಾನ್ಯ ಹಲ್ಲೆಗೆ, ಕನಿಷ್ಠ 6 ತಿಂಗಳು ಜೈಲು ಅಥವಾ 50 ಸಾವಿರ ರು. ದಂಡ, ಗರಿಷ್ಠ 5 ವರ್ಷ ಜೈಲು ಅಥವಾ 5 ಲಕ್ಷ ರು. ದಂಡ

ವೈದ್ಯರ ಮೇಲೆ ತೀವ್ರ ಹಲ್ಲೆಗೆ, ತಪ್ಪಿತಸ್ಥನಿಗೆ 2 ವರ್ಷದಿಂದ 10 ವರ್ಷದವರೆಗೆ ಜೈಲು ಹಾಗೂ 2 ಲಕ್ಷ ರು.ಯಿಂದ 10 ಲಕ್ಷ ರು.ವರೆಗೆ ದಂಡ ವಿಧಿಸುವ ಪ್ರಸ್ತಾವನೆ