ಕಳೆದ ವರ್ಷ ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೀಡಾಗಿದ್ದ ಪತ್ರಕರ್ತ ವಿನೋದ್ ವರ್ಮಾರನ್ನು ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತಮ್ಮ ರಾಜಕೀಯ ಸಲಹೆಗಾರನನ್ನಾಗಿ ನೇಮಿಸಿದ್ದಾರೆ. ಸಾಮಾನ್ಯ ಆಡಳಿತ ಇಲಾಖೆ ಜಾರಿಗೊಳಿಸಿದ ಆದೇಶದ ಅನ್ವಯ ಹಿರಿಯ ಪತ್ರಕರ್ತ  ವಿನೋದ್ ವರ್ಮಾರನ್ನು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ, ಪ್ರದೀಪ್ ಶರ್ಮಾರನ್ನು ನೀತಿ ಯೋಜನೆ, ಕೇಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಲಹೆಗಾರ ಮತ್ತು ರಾಜೇಶ್ ತಿವಾರಿಯನ್ನು ಸಂಸದೀಯ ವ್ಯವಹಾರಗಳ ಸಲಹೆಗರರನ್ನಾಗಿ ನೇಮಿಸಿದ್ದಾರೆಂದು ತಿಳಿದು ಬಂದಿದೆ.

ಚುನಾವಣೆಗೂ ಮೊದಲು ಹಿಂದಿ ದಿನ ಪತ್ರಿಕೆಯೊಂದರ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ, ಬಳಿಕ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ರೂಚಿರ್ ಗರ್ಗ್ ರನ್ನು ಸಿಎಂ ಬಘೇಲ್ ತಮ್ಮ ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿದ್ದಾರೆ. ಆದರೆ ಹಿರಿಯ ಪತ್ರಕರ್ತ ವಿನೋದ್ ವರ್ಮಾರನ್ನು 2017ರಲ್ಲಿ ಅಂದಿನ ರಾಜ್ಯ ಮುಖ್ಯಮಂತ್ರಿಯ ಅಶ್ಲೀಲ ಸಿಡಿ ಮಾಡಿದ್ದ ಪ್ರಕರಣದಲ್ಲಿ ಛತ್ತೀಸ್ಗಢದ ಅವರ ಮನೆಯಿಂದ ಬಂಧಿಸಲಾಗಿತ್ತು. ಅಶ್ಲೀಲ ದೃಶ್ಯ ಚಿತ್ರೀಕರಣ ಹಾಗೂ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು.

ವಿಧಾನಸಭಾ ಚುನಾವಣೆಗೂ ಮೊದಲು ಹಿರಿಯ ಪತ್ರಕರ್ತ ವಿನೋದ್ ವರ್ಮಾ ತಾವು ಕಾಂಗ್ರೆಸ್ ಪಕ್ಷಕ್ಕೆ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದರಿಂದಾಗಿ ಬಿಜೆಪಿಗೆ ನಡುಕ ಹುಟ್ಟಿಕೊಂಡಿದೆ ಎಂದಿದ್ದರು. ಸಿಡಿ ಪ್ರಕರಣದಲ್ಲಿ ಅವರನ್ನು ಬಂಧಿಸಿದ್ದ ವರ ಪರವಾಗಿ ಧ್ವನಿ ಎತ್ತಿದ್ದ ಕಾಂಗ್ರೆಸ್ ಇದು ರಾಜಕೀಯ ಷಡ್ಯಂತ್ರ ಎಂದಿತ್ತು.