ಚಳಿ, ಗಾಳಿ ಎನ್ನದೆ ಊಟ ನೀರು ಬಿಟ್ಟು ಹಗಲಿರುಳು ಗಡಿಯಲ್ಲಿ ದೇಶ ಕಾಯುತ್ತಿದ್ದಾರೆ ನಮ್ಮ ಯೋಧರು. ಆದ್ರೆ ಈ ಊರಿನಲ್ಲಿ ಯೋಧನ ಕುಟುಂಬಕ್ಕೆ ಕುಡಿಯವ ನೀರಿಲ್ಲ. ನೀರಿಗಾಗಿ ಆ ವೃದ್ಧ ದಂಪತಿ ಪಡುತ್ತಿರುವ ಪರದಾಟ ಅಷ್ಟಿಷ್ಟಲ್ಲ. ದೇಶ ಕಾಯುವ ವೀರ ಯೋಧನ ಕುಟುಂಬದ ಕಣ್ಣೀರ ಕಥೆ ಇಲ್ಲಿದೆ ನೋಡಿ.
ತುಮಕೂರು(ಅ.23): ಮಗನ ಫೋಟೋ ಹಿಡಿದು ಅಸಹಾಯಕತೆಯಿಂದ ನಿಂತಿರೋ ಈ ವೃದ್ಧ ದಂಪತಿ ತುಮಕೂರು ಜಿಲ್ಲೆಯ ಪಾವಗಡದವರು. ಕೋಣನಕುರಿಕೆ ಗ್ರಾಮದ ಗಿರಿಯಪ್ಪ ಹಾಗೂ ನಾಗಮ್ಮ ದಂಪತಿ. ಇವರ ಮಗ ವೆಂಕಟೇಶ್ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸ್ತಾ ಇದ್ದಾರೆ. ಆದ್ರೆ ಈ ದಂಪತಿಗೆ ಗ್ರಾಮದಲ್ಲಿ ಕುಡಿಯಲು ಗುಟುಕು ನೀರು ಸಿಗುತ್ತಿಲ್ಲ. ಕುಡಿಯೋ ನೀರಿಗಾಗಿ ಇವರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಕಳೆದ ಐದಾರು ತಿಂಗಳಿನಿಂದ ದೂರದಿಂದ ನೀರು ಹೊತ್ತು ತಂದು ಜೀವನ ನಡೆಸ್ತಾ ಇದ್ದಾರೆ. ರಾಜಕೀಯ ದುರುದ್ದೇಶದಿಂದ ಗುಜ್ಜನೂಡು ಗ್ರಾಮಪಂಚಾಯಿತಿ ಅಧಿಕಾರಿಗಳು ನೀರಿನ ಸಂಪರ್ಕ ನೀಡದೆ ಸತಾಯಿಸುತ್ತಿದ್ದಾರೆ. ಸ್ಥಳೀಯರು ಹೇಳೋ ಪ್ರಕಾರ ಇವರು ಜೆಡಿಎಸ್ ಗೆ ಮತ ಹಾಕಿಲ್ಲ ಹೀಗಾಗಿ ಇವರಿಗೆ ನೀರಿನ ವ್ಯವಸ್ಥೆ ಮಾಡ್ತಿಲ್ಲ ಅಂತಿದ್ದಾರೆ.
ಗ್ರಾ. ಪಂಚಾಯಿತಿ ಈ ಧೋರಣೆಗೆ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿ ಕೇಳಿದ್ರೆ ಖಾಸಗಿ ಕೊಳವೆ ಬಾವಿ ಬಾಡಿಗೆ ತೆಗೆದುಕೊಂಡು ಗ್ರಾಮಕ್ಕೆ ನೀರು ಪೂರೈಸುತ್ತಿದ್ದೇವೆ. ಇನ್ನೆರೆಡು ದಿನದಲ್ಲಿ ಯೋಧನ ಕುಟುಂಬಕ್ಕೂ ನೀರು ಕೊಡ್ತೀವಿ ಅಂತ 6 ತಿಂಗಳಿಂದ ಹೇಳಿದ್ದನ್ನೇ ಮತ್ತೆ ಮತ್ತೇ ಹೇಳ್ತಿದ್ದಾರೆ.
ಒಟ್ಟಾರೆ ಗಡಿ ಕಾಯುವ ಯೋಧನ ಹೆತ್ತವರು ನೀರಿಗೂ ಗತಿಿಯಿಲ್ಲದೆ ಒದ್ದಾಡುತ್ತಿದ್ದಾರೆ. ಈ ವರದಿ ನೋಡಿಯಾದರೂ ಅಧಿಕಾರಿಗಳು ಎಚ್ಚೆತ್ತು ನೀರಿನ ಸಮಸ್ಯೆ ಬಗೆಹರಿಸುತ್ತಾರಾ ಕಾದು ನೋಡಬೇಕಿದೆ.
