ಆತನಿಗೆ ಕ್ರಿಕೆಟ್ ಅಂದ್ರೆ ಪಂಚ ಪ್ರಾಣ. ಹೆಂಡ್ತಿ ಬೇಕಾದ್ರೆ ಬಿಡ್ತೀನಿ ಆದ್ರೆ ಕ್ರಿಕೆಟ್ ಬಿಡೊಲ್ಲ ಅಂತಿದ್ದ. ಹೃದಯ ಸಂಬಂಧಿ ಕಾಯಿಲೆ ಇದ್ದರೂ ಸಹ, ಜಾತ್ರೆಯ ಅಂಗವಾಗಿ ನಡೆದ ಕ್ರಿಕೆಟ್ ಟೂರ್ನಮೆಂಟ್'ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ. ತನ್ನ ತಂಡವನ್ನ ಗೆಲ್ಲಿಸಿ ಖುಷಿಯಿಂದ ಕೇಕೆ ಹಾಕುವಾಗಲೇ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು.
ವಿಜಯಪುರ(ಜುಲೈ 22): ಕ್ರಿಕಿಟ್ ಮೆಚ್ಚಿಕೊಂಡಿದ್ದವನ ಮನೆಯ ಮುಂದೆ ಸ್ಮಶಾನ ಮೌನ..! ನೆಚ್ಚಿನ ಗೆಳೆಯನನ್ನ ಕಳೆದುಕೊಂಡು ದುಃಖಿಸುತ್ತಿರುವ ಯುವಕರ ದಂಡು..! ಮುಗಿಲು ಮುಟ್ಟಿರುವ ಹೆತ್ತವರ ಆಕ್ರಂದನ.! ಇಂತಹ ಮನಕಲುಕೋ ದೃಶ್ಯಗಳು ಕಂಡು ಬಂದಿದ್ದು ವಿಜಯಪುರ ನಗರದ ಹರಣಶಿಖಾರಿ ಕಾಲೋನಿಯಲ್ಲಿ.
ಈತನ ಹೆಸರು ರಾಹುಲ್ ಚವ್ಹಾಣ್. ವಯಸ್ಸು 25 ವರ್ಷ. ಈತನಿಗೆ ಕ್ರಿಕೆಟ್ ಅಂದ್ರೆ ಪಂಚಪ್ರಾಣ. ಊರಿನ ಸುತ್ತಮುತ್ತ ಎಲ್ಲೇ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದರೂ ಅಲ್ಲಿ ರಾಹುಲ್ ಚವ್ಹಾಣ್ ಹಾಜರಾಗ್ತಿದ್ದ. ಈತನಿಗೆ ಕ್ರಿಕೆಟ್ ಮೇಲೆ ಅಂದೆಂತ ಮೋಹ ಅಂದ್ರೆ, ಕೆಲವು ಸಾರಿ ಮನೆಯವರ ಮುಂದೆ, ಹೆಂಡ್ತಿಯನ್ನ ಬೇಕಾದ್ರೆ ಬಿಡ್ತೀನಿ, ಕ್ರಿಕೆಟ್ ಮಾತ್ರ ಬಿಡೊಲ್ಲ ಅಂತಿದ್ನಂತೆ. ಅಂತ ಹುಚ್ಚು ಕ್ರಿಕೆಟ್ ಪ್ರೇಮಿ ಈತ.
ಮೊನ್ನೆ ಮರಗಮ್ಮದೇವಿ ಜಾತ್ರೆ ಅಂಗವಾಗಿ ನಡೆದ ಕ್ರಿಕೆಟ್ ಟೂರ್ನಮೆಂಟ್'ನಲ್ಲಿ ಪಾಲ್ಗೊಂಡಿದ್ದ ರಾಹುಲ್, ಹ್ಯಾಟ್ರಿಕ್ ವಿಕೆಟ್ ಪಡೆಯೋ ಮೂಲಕ ಸೋಲಿನ ಅಂಚಿನಲ್ಲಿದ್ದ ತಂಡವನ್ನ ಗೆಲ್ಲಿಸಿದ್ದ. ಅದೇ ಖುಷಿಯಲ್ಲಿ ಕೇಕೆ ಹಾಕಿ ಕೈ ಮೇಲಕ್ಕೆ ಎತ್ತಿ ಆಕಾಶಕ್ಕೆ ನೆಗೆದಿದ್ದಾನೆ. ವಿಧಿಯ ಕ್ರೂರ ದೃಷ್ಟಿ ಈತನ ಮೇಲೆ ಬಿತ್ತೋ ಏನೋ, ತೀವ್ರ ಹೃದಯಾಘಾತದಿಂದ ಮೂರ್ಛೆ ಹೋಗಿದ್ದಾನೆ. ತಕ್ಷಣವೇ ಗೆಳೆಯರೆಲ್ಲ ಆಸ್ಪತ್ರೆಗೆ ದಾಖಲಿಸಲು ಯತ್ನಸಿದರಾದ್ರು, ಅಷ್ಟೊತ್ತಿಗಾಗಲೇ ಕ್ರಿಕೆಟ್'ನಲ್ಲಿ ಗೆದ್ದಿದ್ದ ರಾಹುಲ್ ಬದುಕಿನ ಆಟದಲ್ಲಿ ಸೋತಿದ್ದ.
ವಿಜಯಪುರ ನಗರದ ದರ್ಬಾರ್ ಕಾಲೇಜಿನಲ್ಲಿ PUC ವ್ಯಾಸಂಗ ಮಾಡ್ತಿದ್ದ ರಾಹುಲ್'ಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. 6 ತಿಂಗಳ ಹಿಂದಷ್ಟೇ ಆಪರೇಷನ್ ಕೂಡ ಆಗಿತ್ತು. 2 ವರ್ಷದವರೆಗೆ ಮನೆಯಲ್ಲೇ ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದರು. ಆದ್ರೆ ಕ್ರಿಕೆಟ್ ಹುಚ್ಚು ಹಿಡಿಸಿಕೊಂಡಿದ್ದ ರಾಹುಲ್, ಮೊನ್ನೆ ಕ್ರಿಕೆಟ್ ಆಟದಲ್ಲಿಯೇ ತನ್ನ ಜೀವನದ ಆಟವನ್ನೂ ಮುಗಿಸಿದ್ದಾನೆ. ಇನ್ನೊಂದು ನೋವಿನ ಸಂಗತಿ ಏನಪ್ಪಾ ಅಂದ್ರೆ, ರಾಹುಲ್'ಗೆ ಕಳೆದ ಒಂದೂವರೆ ವರ್ಷಗಳ ಹಿಂದಷ್ಟೇ ಮದ್ವೆಯಾಗಿತ್ತು. ಇದೀಗ ರಾಹುಲ್'ನ ಹೆಂಡತಿ ಮತ್ತು 1 ವರ್ಷದ ಗಂಡು ಮಗು ಇಬ್ಬರೂ ತಬ್ಬಲಿಯಾಗಿದ್ದಾರೆ.
ಒಟ್ಟಾರೆ ಕ್ರಿಕೆಟ್ ಬಗ್ಗೆ ಭಾರೀ ವ್ಯಾಮೋಹ ಇಟ್ಟುಕೊಂಡಿದ್ದ ರಾಹುಲ್, ಕೊನೆಗೂ ಕ್ರಿಕೆಟ್'ನಲ್ಲಿಯೇ ಬದುಕಿಗೆ ವಿದಾಯ ಹೇಳಿದ್ದಾನೆ. ಕ್ರೂರ ವಿಧಿಯ ಆಟವೇ ಹೀಗೆ ಅಲ್ವಾ? ಅದೇನೆ ಇರಲಿ. ರಾಹುಲ್'ನನ್ನ ಕಳೆದುಕೊಂಡು ಬಡವಾಗಿರುವ ಆತನ ಕುಟುಂಬಕ್ಕೆ ಹಾಗೂ ಆತನ ಸ್ನೇಹಿತರಿಗೆ ಆ ದೇವರೇ ಧೈರ್ಯ ತುಂಬಬೇಕಾಗಿದೆ.
- ಪ್ರಸನ್ನ ದೇಶಪಾಂಡೆ, ಸುವರ್ಣನ್ಯೂಸ್, ವಿಜಯಪುರ
