ವಿಜಯಪುರ[ಮಾ.27]: ವಿಜಯಪುರ ವೈದ್ಯರಿಗೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿರುವ ಆರೋಪದಲ್ಲಿ ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮರಾಮನ್ ಸಂಗಮೇಶ್, ಬಸವರಾಜ ಲಗಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸಂಸ್ಥೆಯು ಆರೋಪದಲ್ಲಿ ಭಾಗಿಯಾದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದೆ.

"

ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯರೊಬ್ಬರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದ ಪ್ರಕರಣದಲ್ಲಿ ಸುವರ್ಣ ನ್ಯೂಸ್ ವಿಜಯಪುರ ಜಿಲ್ಲಾ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮರಾಮನ್ ಸಂಗಮೇಶ್, ಬಸವರಾಜ ಲಗಡಿ ಹಾಗೂ ಸಂಗ್ರಾಮ ವಾರ ಪತ್ರಿಕೆಯ ವರದಿಗಾರ ರವಿ ಬಿಸನಾಳರನ್ನು ಮಂಗಳವಾರ ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಮೂವರು ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಪ್ರಕರಣದ ಬೆನ್ನಲ್ಲೇ ಸುವರ್ಣ ನ್ಯೂಸ್ ಆಡಳಿತ ಮಂಡಳಿ ಜಿಲ್ಲಾ ವರದಿಗಾರ ಪ್ರಸನ್ನ ದೇಶಪಾಂಡೆ ಕೆಲಸದಿಂದ ವಜಾಗೊಳಿಸಿದೆ. ಅಲ್ಲದೇ ಪ್ರಕರಣದ ತನಿಖೆಗೆ ಸುವರ್ಣ ನ್ಯೂಸ್ ಅಗತ್ಯ ಹಾಗೂ ಸಂಪೂರ್ಣ ಸಹಕಾರ ನೀಡಲಿದೆ. 

ಭ್ರಷ್ಟಾಚಾರಕ್ಕೆ ಬೆಂಬಲವಿಲ್ಲ: ನಿಮ್ಮ ಗಮನಕ್ಕೆ ಬಂದರೆ ನಮಗೆ ತಿಳಿಸಿ

ಬ್ಲ್ಯಾಕ್ಮೇಲ್, ಭ್ರಷ್ಟಾಚಾರವನ್ನು ಸುವರ್ಣ ನ್ಯೂಸ್ ಎಂದಿಗೂ ಸಹಿಸುವುದಿಲ್ಲ ಹಾಗೂ ಇಂತಹ ಪ್ರಕರಣದಲ್ಲಿ ಭಾಗಿಯಾದವರನ್ನು ರಕ್ಷಿಸುವುದಿಲ್ಲ . ಪ್ರಕರಣದಲ್ಲಿ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಾಹಿನಿಯ ಎಲ್ಲ ವರದಿಗಾರರಿಗೂ ಈಗಾಗಲೇ ಎಚ್ಚರಿಕೆ ನೀಡಿದೆ ಹಾಗೂ ಇಂತಹ ಅಕ್ರಮಗಳಲ್ಲಿ ಭಾಗಿಯಾಗಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ಸುವರ್ಣ ನ್ಯೂಸ್ ಕಚೇರಿ ಅಥವಾ ಪೊಲೀಸರಿಗೆ ಮಾಹಿತಿ ನೀಡಬಹುದು.