Asianet Suvarna News Asianet Suvarna News

ಅಕ್ರಮ ಪಿಸ್ತೂಲ್ ತಯಾರಿಕೆ ದಂಧೆಯ ಮೂಲವನ್ನ ಪತ್ತೆ ಹಚ್ಚಿದ ವಿಜಯಪುರ ಪೊಲೀಸರು

ಅಕ್ರಮ ಪಿಸ್ತೂಲ್ ತಯಾರಿಕೆಯ ದಂಧೆಯ ಮೂಲವನ್ನೇ ವಿಜಯಪುರ ಜಿಲ್ಲೆಯ ಪೊಲೀಸರು ಪತ್ತೆ ಮಾಡಿದ್ದಾರೆ. ಆದರೆ, ಈ ಸಂಬಂಧ ಯಾರನ್ನೂ ಬಂಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಎನ್.ಸಿದ್ದರಾಮಪ್ಪ ಹೇಳಿದರು.

Vijayapura police found Illigala manufacture Pistol
ವಿಜಯಪುರ (ಮೇ.31):  ಅಕ್ರಮ ಪಿಸ್ತೂಲ್ ತಯಾರಿಕೆಯ ದಂಧೆಯ ಮೂಲವನ್ನೇ ವಿಜಯಪುರ ಜಿಲ್ಲೆಯ ಪೊಲೀಸರು ಪತ್ತೆ ಮಾಡಿದ್ದಾರೆ. ಆದರೆ, ಈ ಸಂಬಂಧ ಯಾರನ್ನೂ ಬಂಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಎನ್.ಸಿದ್ದರಾಮಪ್ಪ ಹೇಳಿದರು.
 
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲೆಯ ಇಂಡಿ ತಾಲೂಕಿನ ಬರಗುಡಿ ಗ್ರಾಮದ ಭೀಮಣ್ಣ ಕ್ಷತ್ರಿ ಎಂಬಾತನನ್ನು ಅಕ್ರಮ ಪಿಸ್ತೂಲ್ ಮಾರಾಟದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಈತ ನೀಡಿದ ಮಾಹಿತಿ ಆಧಾರದ ಮೇಲೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಇಂಡಿ ಡಿಎಸ್ಪಿ ಪ್ರಸನ್ನ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಇಂಡಿ ಸಿಪಿಐ ಚಂದ್ರಕಾಂತ ನಂದರೆಡ್ಡಿ ನೇತೃತ್ವದ ತಂಡವು ಆರೋಪಿಯ ಜತೆಗೆ ಮಧ್ಯಪ್ರದೇಶಕ್ಕೆ ತೆರಳಿತ್ತು. ಈ ವೇಳೆ ಅಲ್ಲಿನ ಬರವಾನಿ ಜಿಲ್ಲೆಯ ಶೇಂದೆವಾಡಿ ತಾಲೂಕಿನ ಬಲವಾಡಿ, ಉಮರ್ತಿ ಗ್ರಾಮಗಳಿಗೆ ತೆರಳಿ ಪರಿಶೀಲಿಸಿದ್ದಾರೆ. ಆಗ ಅಲ್ಲಿ ಬೇಲ್ ಪತ್ತಾರ ಅಲೆಮಾರಿ ಜನಾಂಗದ ಸುಮಾರು ೨೦೦ ಕುಟುಂಬಗಳು ವಾಸವಾಗಿದ್ದು, ಅವರೆಲ್ಲರೂ ಸುಮಾರು 30 ವರ್ಷಗಳಿಂದ ಈ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಮತ್ತು ಮಾರಾಟದ ದಂಧೆಯಲ್ಲಿ ತೊಡಗಿದ್ದಾರೆ. ಈ ಪೈಕಿ ಕೆಲವರು ಇಂಡಿಯನ್ ಆರ್ಮ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ವಜಾಗೊಂಡಿದ್ದಾರೆ. ಇವರು ಮಷಿನರಿ ಮೂಲಕ ದೊಡ್ಡ ಪ್ರಮಾಣದ ಅಕ್ರಮ ಪಿಸ್ತೂಲ್ ತಯಾರಿಕೆ ಮಾಡಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಇನ್ನೂ ಹಲವಾರು ರಾಜ್ಯಗಳಿಗೆ ಅಕ್ರಮವಾಗಿ ಪಿಸ್ತೂಲ್ ಪೂರೈಸುತ್ತಿದ್ದರು ಎಂಬುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದರು.
 
ಸದ್ಯ ಮಧ್ಯಪ್ರದೇಶದ ಉಮರ್ತಿ ಗ್ರಾಮದ ತನಮನ್‌ಸಿಂಗ್ ಧರ್ಮಸಿಂಗ್, ನಿಸಾನಸಿಂಗ್ ಧರ್ಮಸಿಂಗ್, ಶ್ರೀಸಿಂಗ್ ದಾರಾಸಿಂಗ್, ಪ್ರೀತಂಸಿಂಗ್ ದಾರಾಸಿಂಗ್, ಲಕ್ಕನಸಿಂಗ್ ಮಯೂಸ್‌ಸಿಂಗ್, ಕುಲದೀಪಸಿಂಗ್, ನರೇಂದ್ರಸಿಂಗ್, ಗುಲಾಬಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಉಮರ್ತಿಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಅಗತ್ಯದ ಬಂದೋಬಸ್ತ್‌ನೊಂದಿಗೆ ತೆರಳದೆ ಅವರನ್ನು ಬಂಧಿಸುವಂತಿಲ್ಲ. ಈ ಬಗ್ಗೆ ಮಧ್ಯಪ್ರದೇಶ ಪೊಲೀಸರಿಗೆ ತಿಳಿಸಲಾಗಿದೆ ಎಂದು ವಿವರಿಸಿದರು.
ವಿಚಾರಣೆಗೊಳಪಡಿಸಿದ 8 ಜನರ ತಂಡದ ತನಮನ್‌ಸಿಂಗ್ ಹಾಗೂ ಅವರ ಮನೆತನದವರು ಕರ್ನಾಟಕದ ಇಂಡಿ, ಆಳಂದ, ಅಫಜಲಪೂರ, ಮಹಾರಾಷ್ಟ್ರದ ಸೊಲ್ಲಾಪುರಗಳಲ್ಲಿ ತಮ್ಮ ಸಹಚರರು ಹಾಗೂ ಮಧ್ಯವರ್ತಿಗಳ ಮೂಲಕ ಅಕ್ರಮ ಪಿಸ್ತೂಲ್‌ಗಳನ್ನು ₹15,000 ರಿಂದ ₹30,000 ರವರೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
Follow Us:
Download App:
  • android
  • ios